ಕುಂದಾಪುರ: ಎರಡು ದಿನಗಳ ಬಳಿಕ ನೀರುಪಾಲಾದ ಯುವಕನ‌ ಮೃತದೇಹ ಪತ್ತೆ

Spread the love


ಕುಂದಾಪುರ: ಎರಡು ದಿನಗಳ ಬಳಿಕ ನೀರುಪಾಲಾದ ಯುವಕನ‌ ಮೃತದೇಹ ಪತ್ತೆ

ಕುಂದಾಪುರ: ಮೊವಾಡಿ‌ ಸೇತುವೆ ಬಳಿ‌ ನದಿಯಲ್ಲಿ ಸ್ನೇಹಿತನೊಂದಿಗೆ ಈಜುತ್ತಿದ್ದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಬಂಟ್ವಾಡಿ ಸೇತುವೆ ಬಳಿಯ ಸೌಪರ್ಣಿಕ ನದಿಯಲ್ಲಿ ಪತ್ತೆಯಾಗಿದೆ.

ಇಲ್ಲಿ‌ನ ತ್ರಾಸಿ ಸಮೀಪದ ಹೋಲಿಕ್ರಾಸ್ ನಿವಾಸಿ ಮಹೇಂದ್ರ (24) ಮೃತ ಯುವಕ.

ಭಾನುವಾರ ಸಂಜೆ ಮೊವಾಡಿಯ ಸೌಪರ್ಣಿಕಾ ನದಿ ತೀರಕ್ಕೆ ಮಹೇಂದ್ರ, ಆಶಿಕ್ ಹಾಗೂ ಶರತ್ ತೆರಳಿದ್ದರು. ಮಹೇಂದ್ರ ಹಾಗೂ ಆಶಿಕ್ ನೀರಿಗೆ ಇಳಿದಿದ್ದು ಇನ್ನೋರ್ವ ಸ್ನೇಹಿತ ಶರತ್ ಸೇತುವೆ ಮೇಲೆ ನಿಂತು ವೀಕ್ಷಿಸುತ್ತಿದ್ದನು. ಈ ವೇಳೆ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ಮಹೇಂದ್ರ ನೀರುಪಾಲಾಗಿದ್ದನು. ಆಶಿಕ್ ನನ್ನು ಸ್ಥಳೀಯರಾದ ರತ್ನಾಕರ್ ಕಾಂಚನ್ ಮತ್ತು ಯೋಗೇಂದ್ರ ಕಾಂಚನ್ ರಕ್ಷಿಸಿದ್ದರು.

ಸತತ ಎರಡೂ ದಿನಗಳಿಂದಲೂ ನೀರುಪಾಲಾದ ಯುವಕನ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳೀಯರು ದೋಣಿ ಮೂಲಕ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಅಲ್ಲದೇ ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯ ಮುಳುಗುತಜ್ಞ ಗಂಗೊಳ್ಳಿಯ ಲೈಟ್ ಹೌಸ್ ನ ದಿನೇಶ್ ಖಾರ್ವಿ, ಸ್ಥಳೀಯರಾದ ಸಂದೇಶ್ ಮತ್ತು ಗುರುರಾಜ್ ಶೋಧ ಕಾರ್ಯದಲ್ಲಿ ಸಹಕರಿಸಿದ್ದಾರೆ.

ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love