ಕುಂದಾಪುರ: ಗಾಯಗೊಂಡ ಜಿಂಕೆಯನ್ನು ರಕ್ಷಿಸಿದ ಗ್ರಾಮಸ್ಥರು

Spread the love

ಗಾಯಗೊಂಡ ಜಿಂಕೆಯನ್ನು ರಕ್ಷಿಸಿದ ಗ್ರಾಮಸ್ಥರು

ಕುಂದಾಪುರ: ಕಾಡು ಪ್ರಾಣಿಯ ದಾಳಿಗೆ ತುತ್ತಾಗಿ ಅಸ್ವಸ್ಥಗೊಂಡು ನರಳಾಡುತ್ತಿದ್ದ ಜಿಂಕೆಯೊಂದು ಇಲ್ಲಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಹೊಸಹಕ್ಲು ಎಂಬಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಹೊಸಹಕ್ಲು ಸಂಜೀವ ದೇವಾಡಿಗ ಎಂಬುವರು ತಮ್ಮ ತೋಟಕ್ಕೆ ನೀರು ಹಾಯಿಸಲು ಹೋದಾಗ ತೋಟದ ಪಕ್ಕದಲ್ಲಿಯೇ ಪ್ರಾಣಿ ಕೂಗುವ ಶಬ್ದ ಕೇಳಿ ಅಲ್ಲಿಗೆ ತೆರಳಿದ‌ ಸಂದರ್ಭ ಜಿಂಕೆ ಅಸ್ವಸ್ಥಗೊಂಡು ಬಿದ್ದಿರುವುದು ಗಮನಕಗಕೆ ಬಂದಿದೆ. ಕೂಡಲೇ ಸಂಜೀವ‌ ದೇವಾಡಿಗ ಅವರು ಅರಣ್ಯ ಇಲಾಖೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಮುಳ್ಳುಗಿಡಗಳ ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡು ರಕ್ತಸ್ತಾವ್ರಗೊಂಡಿದ್ದ ಜಿಂಕೆಯನ್ನು ಸ್ಥಳೀಯ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಸೇರಿದಂತೆ ಸ್ಥಳೀಯರು ಸೇರಿಕೊಂಡು ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಜಿಂಕೆಯನ್ನು ರಕ್ಷಿಸುವ ಮೂಲಕ ಪ್ರಾಣಿ ಪ್ರೀತಿ ತೋರಿಸಿ ಮಾನವೀಯತೆ ಮೆರೆದಿದ್ದಾರೆ.

ಸ್ಥಳೀಯರಾದ ಸುಬ್ರಹ್ಮಣ್ಯ ದೇವಾಡಿಗ, ಭಾಸ್ಕರ್ ದೇವಾಡಿಗ, ನವೀನ್, ವೆಂಕಟೇಶ್ ದೇವಾಡಿಗ, ಸುದೀಂದ್ರ ದೇವಾಡಿಗ ಮತ್ತಿತರರು ರಕ್ಷಣಾ ಕಾರರ್ಯದಲ್ಲಿ ಇದ್ದರು‌.

ಅರಣ್ಯಧಿಕಾರಿಗಳ ಭೇಟಿ:
ಕುಂದಾಪುರ ಅರಣ್ಯ ಇಲಾಖೆ ಆರ್‌ಎಫ್‌ಒ ಪ್ರಭಾಕರ್ ಕುಲಾಲ್ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ಉದಯ ಕೋಟೇಶ್ವರ ಮತ್ತು ಗುರುರಾಜ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಾಲತಿ, ಸೋಮಶೇಖರ್, ಅಶೋಕ್ ಇವರೊಂದಿಗೆ ಸ್ಥಳೀಯ ಪಶು ವೈದ್ಯರಾದ ಸದಾಶಿವ ಇವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಯ ವಶಕ್ಕೆ ಪಡೆದುಕೊಂಡು ಜಿಂಕೆ ಚೇತರಿಕೆಗೊಂಡ ಬಳಿಕ ವನ್ಯಜೀವ ಅಭಯಾರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದೆ. ತುರ್ತು ಸ್ಪಂದಿಸಿದ ಸ್ಥಳೀಯರ ಸಹಕಾರಕ್ಕೆ ಅರಣ್ಯಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಭಾಗದಲ್ಲಿ ಹಗಲಿನಲ್ಲಿಯೇ ಚಿರತೆಗಳ ಓಡಾಟವಿದ್ದು, ಹಲವು ಬಾರಿ ಕಪ್ಪು ಬಣ್ಣದ ಚಿರತೆಗಳು ಕಾಣಿಸಿಕೊಂಡಿವೆ. ಸಾಕಷ್ಟು ಜಾನುವಾರುಗಳು ಮತ್ತು ಸಾಕು ನಾಯಿಗಳು ಚಿರತೆಯ ದಾಳಿಗೆ ತುತ್ತಾಗಿವೆ. ಜಿಂಕೆಯೂ ಕೂಡ ಇದೇ ಚಿರತೆಗಳಿಂದ‌ ದಾ‌ಳಿಗೊಳಗಾಗಿರಬಹುದು ಎಂದು ಶಂಕಿಸಲಾಗಿದೆ‌. ಅಲ್ಲದೇ ಸಮೀಪದಲ್ಲೇ ಸಾಕಷ್ಟು‌ ಮನೆಗಳಿದ್ದು, ವಿದ್ಯಾರ್ಥಿಗಳು ಹಾಗೂ ಕೃಷಿಕರು ದಿನನಿತ್ಯ ಸಂಚರಿಸುವ ಈ‌ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್‌ ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ಆಗ್ರಹಿಸಿದರು.

ಈ ಭಾಗದಲ್ಲಿ ಚಿರತೆ ಕಾಟವಿರುವ ಕುರಿತು ಸ್ಥಳೀಯರ ದೂರುಗಳು ಬಂದಿವೆ. ಸಾಕಷ್ಟು ಭಾರಿ ಬೋನ್‌ಗಳನ್ನು ಇಟ್ಟು ಇಲಾಖೆ ಕಾರ್ಯಚರಣೆ ಮಾಡಿದೆ. ಇದಲ್ಲದೇ ಈ ಭಾಗದಲ್ಲಿ ಚಿರತೆಯ ಸೆರೆಗಾಗಿ ಬೋನ್‌ಗಳನ್ನು ಇರಿಸಲು ಸ್ಥಳೀಯ ಇಲಾಖೆಯ ಸಿಬ್ಬಂದಿಗಳಿಗೆ ಆದೇಶ ನೀಡಿದ್ದೇವೆ. ಸ್ಥಳೀಯರೊಂದಿಗೆ ಇಲಾಖೆ ಸದಾ ಸಿದ್ಧವಿದೆ. ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಕುಂದಾಪುರ ಆರ್‌ ಎಫ್‌ ಓ ಪ್ರಭಾಕರ ಕುಲಾಲ್‌ ಹೇಳಿದರು.


Spread the love