
ಕುಂದಾಪುರ: ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಕುಂದಾಪುರ: ಕುಂದಾಪುರದ ಯುವ ಮೆರಿಡಿಯನ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ರೂ 2.86 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೇಶ್ವರದ ಯುವ ಮೆರಿಡಿಯನ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನವೆಂಬರ್ 27 ರಿಂದ 29 ರ ವರೆಗೆ ಮೂರುದಿನ ಓರಾ ಫೈನ್ ಜ್ಯುವೆಲರಿ. ಪ್ರೈ. ಲಿ . ಸಂಸ್ಥೆಯ ವತಿಯಿಂದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ತೆರೆಯಲಾಗಿದ್ದು ನವೆಂಬರ್ 29 ರಂದು ಮಧ್ಯಾಹ್ನ 12.17 ರಿಂದ 12.20 ನಡುವೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನು ಗ್ರಾಹಕರಂತೆ ಮಾರಾಟ ಮಳಿಗೆಗೆ ಬಂದು 2 ಜೊತೆ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳವಾದ 2 ಚಿನ್ನದ ಬಳೆಗಳು ಸುಮಾರು 43 ಗ್ರಾಂ ಇದ್ದು, ಅವುಗಳ ಅಂದಾಜು ಮೌಲ್ಯ ರೂ 2,86,000/- ಆಗಿದ್ದು, ಓರಾ ಫೈನ್ ಜ್ಯುವೆಲರಿ. ಪ್ರೈ. ಲಿ . ಸಂಸ್ಥೆಯ ಮ್ಯಾನೇಜರ್ ರಮೇಶ ಕುಮಾರ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಮೇಶ ಕುಮಾರ್ ದೂರಿನಂತೆ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.