
ಕುಂದಾಪುರ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕಾರ್ಮಿಕನ ಕೊಲೆ
ಕುಂದಾಪುರ: ಮಲಗಿದ್ದ ಕಾರ್ಮಿಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದ ಘಟನೆ ಇಲ್ಲಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿನಮಕ್ಕಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಬಾಗಲಕೋಟೆ ಮೂಲದ ಸಂಗಪ್ಪ ಅಲಿಯಾಸ್ ಸಂಗಮೇಶ (42) ಕೊಲೆಯಾದ ವ್ಯಕ್ತಿ. ಈತನೊಂದಿಗೆ ಇದ್ದ ಇನ್ನೋರ್ವ ವಲಸೆ ಕಾರ್ಮಿಕ ಮಂಡ್ಯ ಮೂಲದ ರಾಜಾ (36) ಕೊಲೆ ಮಾಡಿದ ಆರೋಪಿ.
ವಲಸೆ ಕಾರ್ಮಿಕರಾದ ಸಂಗಮೇಶ್ ಹಾಗೂ ರಾಜಾ ಕುಂದಾಪುರದಲ್ಲಿ ನೆಲೆಸುತ್ತಿದ್ದು, ಕೆಲಸವಿದ್ದಾಗ ತೆರಳಿದ್ದಲ್ಲಿಯೇ ಉಳಿಯುತ್ತಿದ್ದರು. ಅಂತೆಯೇ ಆಲೂರು ಗ್ರಾ.ಪಂ ವ್ಯಾಪ್ತಿಯ ಕಟ್ಟಿನಮಕ್ಕಿಯ ನಾಗೇಂದ್ರ ಆಚಾರ್ಯ ಎನ್ನುವರು ಗುತ್ತಿಗೆ ಕೆಲಸ ಮಾಡುತ್ತಿದ್ದು ಆಗ್ಗಾಗೆ ಇವರ ಕೆಲಸದ ನಿಮಿತ್ತ ರಾಜಾ, ಸಂಗಪ್ಪ ಹಾಗೂ ಸಂಗಡಿಗರು ಬರುತ್ತಿದ್ದರು. ಕಳೆದ ವಾರವೂ ಮೂರ್ನಾಲ್ಕು ದಿನ ಇವರೊಂದಿಗೆ ಕೆಲಸ ಮಾಡಿದ್ದು ಶನಿವಾರ ಸಂಬಳ ಪಡೆದು ಕುಂದಾಪುರಕ್ಕೆ ವಾಪಾಸ್ಸಾಗಿದ್ದರು. ಭಾನುವಾರ ಮತ್ತೆ ಕಟ್ಟಿನಮಕ್ಕಿಗೆ ಆಗಮಿಸಿ ನಾಗೇಂದ್ರ ಅವರ ಮನೆ ಎದುರು ನಿರ್ಮಾಣವಾಗುತ್ತಿದ್ದ ಮನೆಯ ಬಳಿ ಶೆಡ್ ನಲ್ಲಿ ಉಳಿದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ರಾಜಾ ಹಾಗೂ ಸಂಗಪ್ಪ ನಡುವೆ ಚಕಮಕಿ ನಡೆದಿದ್ದು ಸಂಗಪ್ಪ ಶೆಡ್ ಎದುರಿನ ಮನೆ ಪಂಚಾಂಗದ ಮೇಲೆ ಮಲಗಿದ್ದಾಗ ರಾಜಾ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ. ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ನಾಗೇಂದ್ರ ಆಚಾರ್ಯ ಮನೆಗೆ ಬಂದು ಕೃತ್ಯ ಒಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ, ಗಂಗೊಳ್ಳಿ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಜಯಶ್ರೀ ಹೊನ್ನೂರು, ಕೊಲ್ಲೂರು ಠಾಣೆ ತನಿಖಾ ಪಿಎಸ್ಐ ಸುಧಾರಾಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಫಾರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗಂಗೊಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.