ಕುಂದಾಪುರ: ನಾವೇನು ಆಟದ ಗೊಂಬೆಗಳಲ್ಲ, ತಡೆಬೇಲಿ ಒಡೆದು ಹಾಕುತ್ತೇವೆ – ಅಧಿಕಾರಿಗಳ ವಿರುದ್ದ ಪುರಸಭಾ ಸದಸ್ಯರ ಅಸಮಾಧಾನ

Spread the love

ಕುಂದಾಪುರ: ನಾವೇನು ಆಟದ ಗೊಂಬೆಗಳಲ್ಲ, ತಡೆಬೇಲಿ ಒಡೆದು ಹಾಕುತ್ತೇವೆ – ಅಧಿಕಾರಿಗಳ ವಿರುದ್ದ ಪುರಸಭಾ ಸದಸ್ಯರ ಅಸಮಾಧಾನ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪರಿಮಿತಿಯೊಳಗೆ ಕುಂದಾಪುರ ಪ್ರವೇಶಕ್ಕೆ ಅನುಮತಿ‌ಕೊಡಿ ಎಂದು ಸಂಸದರು, ಶಾಸಕರು ಬೇಡಿಕೆ ಇಟ್ಟಿದ್ದಾರೆ. ನಾವೇನು ನಿಮ್ಮ ಬಳಿ ಭಿಕ್ಷೆ ಕೇಳುತ್ತಿಲ್ಲ. ಪ್ರತೀ ಬಾರಿ ಸಭೆಗೆ ಒಬ್ಬೊಬ್ಬ ಅಧಿಕಾರಿಗಳು ಬಂದು ಸುಳ್ಳು ಭರವಸೆಗಳನ್ನು ಕೊಟ್ಟು ಹೋಗುತ್ತೀರಿ. ನಾವೇನು ನಿಮಗೆ ಆಟದ ಗೊಂಬೆಗಳ ಹಾಗೆ ಕಾಣುತ್ತಿದ್ದೇವಾ. ನಿಮ್ಮಲ್ಲಿ ಸಾಧ್ಯವಿಲ್ಲದಿದ್ದರೆ ಹೇಳಿಬಿಡಿ. ನಮ್ಮ ಊರಿನ ಬಗ್ಗೆ ಕಲನಮಗೆ ಕಾಳಜಿ ಇದೆ. ನೀವು ಕೇಸು ಹಾಕಿ‌ ನಮ್ಮನ್ನು ಜೈಲಿಗೆ ಕಳುಹಿಸಿದರೂ ಚಿಂತೆ ಇಲ್ಲ. ತಡೆಬೇಲಿ ಒಡೆದು ನಾವೇ ನಗರ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತೇವೆ ಎಂದು ಪುರಸಭಾ ಸದಸ್ಯ ಗಿರೀಶ್ ಜಿ.ಕೆ ಅಸಮಧಾನ ವ್ಯಕ್ತಪಡಿಸಿದರು.
ಮಂಗಳವಾರ ಸಂಜೆ ಇಲ್ಲಿನ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ನಗರ ಒಳ ಪ್ರವೇಶಿಸಲು ಹಾಗೂ ನಗರದಿಂದ ಹೆದ್ದಾರಿಗೆ ತೆರಳಲು ಅವಕಾಶವಾಗುವಂತೆ ಬೊಬ್ಬರ್ಯನಕಟ್ಟೆ ಬಳಿಯಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಬೇಕು ಎನ್ನುವ ಸ್ಥಳೀಯರ ಒಕ್ಕೊರಲ ಅಹವಾಲನ್ನು ಹೆದ್ದಾರಿಯ ಯೋಜನಾ ನಿರ್ದೇಶಕರು ಏಕಪಕ್ಷೀಯವಾಗಿ ಕಡೆಗಣಿಸಿರುವುದು ಸರಿಯಲ್ಲ. ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸಾರ್ವಜನಿಕರು, ಶಾಸಕರು, ಕೇಂದ್ರ ಸಚಿವರು, ಸಂಘ ಸಂಸ್ಥೆಗಳು, ಸ್ಥಳೀಯಾಡಳಿತ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ, ಹೆದ್ದಾರಿ ಇಲಾಖೆ ಈ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳದೆ ಜನರ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದರು.
ಇದಕ್ಕೆ ಉತ್ತರಿಸಿದ ಹೆದ್ದಾರಿ ಇಲಾಖೆಯ ಅಧಿಕಾರಿಗಳು ನಗರಕ್ಕೆ ಹೆದ್ದಾರಿಯಿಂದ ಸಂಚಾರಕ್ಕೆ ಕಲ್ಪಿಸಿದ್ದಲ್ಲಿ ಈ ಭಾಗದಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುವುದಾಗಿ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಯೋಜನಾ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮೋಹನ್‌ದಾಸ್‌ ಶೆಣೈ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಸಂತೋಷ್‌ ಶೆಟ್ಟಿ, ರತ್ನಾಕರ ಚರ್ಚ್‌ರಸ್ತೆ ಅವರುಗಳು, ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದಿಂದಾಗಿ, ಸುಂದರ ಕುಂದಾಪುರದ ಕನಸನ್ನು ಹೊಸಕಿ ಹಾಕಲಾಗಿದೆ. ಬೇರೆ ಬೇರೆ ಊರುಗಳಲ್ಲಿ ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಕುಂದಾಪುರಕ್ಕೆ ಮಾತ್ರ ಮಲತಾಯಿ ಧೋರಣೆ ತೋರಲಾಗುತ್ತಿದೆ. ವ್ಯವಹಾರಿಕಾ ಕೇಂದ್ರವಾಗಿದ್ದ ಕುಂದಾಪುರ, ಹೆದ್ದಾರಿ ಚತುಷ್ಪಥದ ಬಳಿಕ ವ್ಯವಹಾರವಿಲ್ಲದೆ ಬಿಕೋ ಎನ್ನುತ್ತಿದೆ. ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಸ್ಥಳ ಪರಿಶೀಲನೆ ನಡೆಸಿ, ನಗರ ಪ್ರವೇಶಕ್ಕೆ ಅವಕಾಶ ಇಲ್ಲ ಎನ್ನುವ ಏಕ ಪಕ್ಷೀಯವಾಗಿ ತೀರ್ಮಾನ ಪ್ರಕಟಿಸುವ ಹೆದ್ದಾರಿ ಯೋಜನಾ ನಿರ್ದೇಶಕರ ನಡೆ, ಒಪ್ಪತಕ್ಕದ್ದಲ್ಲ. ಪುರಸಭೆಯ ಒಂದೊಂದು ಸಭೆಗೆ ಬೇರೆ ಬೇರೆ ಅಧಿಕಾರಿಗಳು ಬರುವುದರಿಂದ ಇಲ್ಲಿನ ಸಮಸ್ಯೆಯ ಕುರಿತು ಸಮರ್ಪಕ ಮಾಹಿತಿಗಳೇ ತಲುಪುತ್ತಿಲ್ಲ ಎಂದರು.
ಸರ್ವಾನುಮತದ ನಿರ್ಣಯ:
ಸರ್ಕಾರಿ ಕಚೇರಿ, ಸಾರ್ವಜನಿಕ ಸೇವಾ ಕಚೇರಿ, ಶಾಲಾ-ಕಾಲೇಜು, ವಿದ್ಯಾರ್ಥಿಗಳ ಹಾಸ್ಟೆಲ್, ಸಭಾಭವನಗಳು, ಜನವಸತಿ ಪ್ರದೇಶಗಳಿರುವ ಬೊಬ್ಬರ್ಯನ ಕಟ್ಟೆಯ ಬಳಿಯಲ್ಲಿ ಹೆದ್ದಾರಿಯಿಂದ ನಗರಕ್ಕೆ ಬರಲು ಹಾಗೂ ಎದುರು ಬದಿಯಲ್ಲಿ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಬರಲು ತಡೆ ನಿವಾರಣೆ ಮಾಡಿ ಅವಕಾಶ ಮಾಡಿಕೊಡಲು ನಿರ್ಣಯ ಕೈಗೊಳ್ಳಲಾಯಿತು ಹಾಗೂ ಈ ನಿರ್ಣಯ ಅನುಷ್ಠಾನಗೊಳಿಸಲು ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ತೀರ್ಮಾನಿಸಲಾಯಿತು.
ವಾಹನ ನಿಲುಗಡೆ ಬಗ್ಗೆ ಕಾವೇರಿದ ಚರ್ಚೆ:
ನಗರದ ವಾಹನ ನಿಲುಗಡೆಯ ಕುರಿತು ಸಭೆಯಲ್ಲಿ ಸಾಕಷ್ಟು ಹೊತ್ತು ಕಾವೇರಿದ ಚರ್ಚೆ ನಡೆಯಿತು. ವಾಹನ ನಿಲುಗಡೆಗೆ ಸರಿಯಾದ ಜಾಗ ಗುರುತಿಸದೆ, ಮಾಹಿತಿ ಫಲಕ ಅಳವಡಿಸದೆ ಕಾನೂನು ಕ್ರಮಕ್ಕೆ ಮುಂದಾಗುವುದು ಸರಿಯಲ್ಲ. ಹೊರ ಬಾಗದಿಂದ ಬರುವವರು, ಮಾಹಿತಿ ಕೊರತೆಯಿಂದಾಗಿ ವಾಹನ ನಿಲುಗಡೆ ಮಾಡುತ್ತಾರೆ. ಈ ಹಿಂದೆ ನಗರದಲ್ಲಿ ಕಟ್ಟಡ ನಿರ್ಮಿಸುವ ವೇಳೆ, ಅಗತ್ಯವಾಗಿರುವಷ್ಟು ಸೆಟ್‌ಬ್ಯಾಕ್ ಬಿಡದೆ ಇರುವುದರಿಂದಾಗಿ ಇದೀಗ ಸಮಸ್ಯೆಗಳು ಕಾಣುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಮಾತನಾಡಿದ ಸದಸ್ಯರಿಗೆ ಪ್ರತಿ ಸ್ಪಂದಿಸಿದ ಸಂಚಾರಿ ಠಾಣೆ ಪಿಎಸ್‌ಐ ಸುದರ್ಶನ್ ಅವರು, ನಗರದ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಇಲಾಖೆ ನೀಲ ನಕಾಶೆ ಸಿದ್ದಪಡಿಸಿದೆ ಎಂದರು. ಈ ಕುರಿತು ಪ್ರತ್ಯೇಕ ಸಭೆ ಕರೆದು ಅಭಿಪ್ರಾಯ ಪಡೆದುಕೊಳ್ಳುವ ಕುರಿತು ಸಲಹೆಗಳು ಬಂದವು.
ನಗರದಲ್ಲಿನ ಅತಿಕ್ರಮಣ ಕಟ್ಟಡಗಳ ತೆರವಿಗೆ ಈ ಹಿಂದೆ ನಡೆದ ಕಾರ್ಯಾಚರಣೆಯ ವೇಳೆಯಲ್ಲಿ ಬೆರಳೆಣಿಕೆಯ ಕಟ್ಟಡಗಳನ್ನು ಮಾತ್ರ ತೆರವು ಮಾಡಲಾಗಿತ್ತು ಎಂದು ಹೇಳಿದ ಶ್ರೀಧರ ಶೇರುಗಾರ, ಅತಿಕ್ರಮಣ ಕಟ್ಟಡಗಳ ತೆರವಿಗೆ ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾಗಬೇಕು ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರು, ಸಾಕಷ್ಟು ಅತಿಕ್ರಮಣ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಕೆಲವು ಕಟ್ಟಡದ ಮಾಲಿಕರು ನ್ಯಾಯಾಲಯಕ್ಕೆ ಹೋಗಿರುವುದರಿಂದ ತೊಡಕಾಗಿದೆ. ಅತಿಕ್ರಮಣ ತೆರವಿಗೆ ಪುರಸಭೆ ನಿರ್ಣಯಿಸಿ ತೀರ್ಮಾನ ಕೈಗೊಂಡಲಿಲ್ಲ, ಕಾರ್ಯಾಚರಣೆಗೆ ನಮ್ಮ ಅಭ್ಯಂತರವಿಲ್ಲ ಎಂದರು.
ಅವೈಜ್ಞಾನಿಕ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ನಿತ್ಯ ಕಿರುಕುಳವಾಗುತ್ತಿರುವ ಹೆದ್ದಾರಿ ಇಲಾಖೆಯ ಕಾರ್ಯ ವೈಖರಿಯ ಕುರಿತು ಸಾರ್ವಜನಿಕ ಹಿತಾಸಕ್ತಿಯ ದೂರನ್ನು ದಾಖಲಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಚಂದ್ರಶೇಖರ ಖಾರ್ವಿ ಸಲಹೆ ನೀಡಿದರು. ಕೋಡಿಯಲ್ಲಿನ ದಾರಿ ದೀಪ ಸಮಸ್ಯೆ ನಿವಾರಣೆ ಸಾಕಷ್ಟು ಪತ್ರ ಬರೆದಿದ್ದರೂ, ಅದಕ್ಕೆ ಸೂಕ್ತ ಸ್ಪಂದನ ದೊರಕುತ್ತಿಲ್ಲ ಎಂದು ಅಶ್ಫಾಕ್ ಕೋಡಿ ಅಳಲು ತೋಡಿಕೊಂಡರು. ವಾಹನಗಳ ಕರ್ಕಶ ಹಾರ್ನ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವಂತೆ ಮನವಿಗಳು ಬಂದವು.
ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Spread the love