
ಕುಂದಾಪುರ ಪಾರಿಜಾತ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಪುರಸಭೆಗೆ ಆರ್.ಜಿ.ಪಿ.ಆರ್.ಎಸ್ ಮನವಿ
ಕುಂದಾಪುರ: ನಗರದ ಪಾರಿಜಾತ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ನಿರ್ಮಾಣಕ್ಕಾಗಿ ಉಡುಪಿ ಜಿಲ್ಲಾ ರಾಜೀವ್ ಗಾಂಧೀ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಕುಂದಾಪುರ ಪುರಸಭೆಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ಪುರಸಭೆ ವ್ಯಾಪ್ತಿಯ ಯಾವುದೇ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಇಡದೇ ಕೇವಲ ಜಾತಿ ವ್ಯವಸ್ಥೆಯಿಂದಲೇ ಕಾಣುತ್ತಿರುವುದು ದುರದೃಷ್ಟಕರ. ಭಾರತದ ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರ ಸಾಧನೆ ಅಜರಾಮರವಾಗಿದ್ದು ಜೀವನದ ಪ್ರತಿಕ್ಷಣವನ್ನು ಶೋಷಿತರ ಧ್ವನಿಯಾಗಿ ಕಳೆದವರು. ಅಂಬೇಡ್ಕರ್ ಅವರನ್ನು ವಿಶ್ವವೇ ಹಾಡಿ ಹೊಗಳಿದರೂ ಕೂಡ ಬುದ್ದಿವಂತರ ಜಿಲ್ಲೆ ಉಡುಪಿಯ ಯಾವುದೇ ಮುಖ್ಯ ಸ್ಥಳಗಳಲ್ಲಿ ಇವರ ಹೆಸರನ್ನು ಚಿರಸ್ಥಾಯಿಯಾಗಿಸುವ ಪುತ್ಥಳಿ ನಿರ್ಮಾಣ ಮಾಡದೇ ಸಂವಿಧಾನ ಶಿಲ್ಪಿಗೆ ಅಗೌರವ ತೋರಲಾಗಿದೆ. ಆದ್ದರಿಂದ ಕುಂದಾಪುರ ಹೃದಯಭಾಗವಾದ ಪಾರಿಜಾತ್ ಸರ್ಕಲ್ ನಲ್ಲಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಿ ಮುಂಬರುವ ಅಂಬೇಡ್ಕರ್ ಜಯತಿಯಂದು ಗೌರವಿಸಬೇಕೆಂದು ಆಗ್ರಹಿಸಿ ಈ ಮನವಿ ಸಲ್ಲಿಸಲಾಗಿದೆ.
ಉಡುಪಿ ಜಿಲ್ಲಾ ರಾಜೀವ್ ಗಾಂಧೀ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಸತೀಶ್ ಜಪ್ತಿ ಹಾಗೂ ಇತರರು ಉಪಸ್ಥಿತರಿದ್ದರು.