ಕುಂದಾಪುರ ಪುರಸಭೆ ಸಾಮಾನ್ಯ ಸಭೆ:  ಅಂಗಡಿ ಮ್ಹಾಲಿಕರಿಗೆ ತೆರಿಗೆ ವಿನಾಯಿತಿ ನೀಡಲು  ಸದಸ್ಯರ ಒತ್ತಾಯ 

Spread the love

ಕುಂದಾಪುರ ಪುರಸಭೆ ಸಾಮಾನ್ಯ ಸಭೆ:  ಅಂಗಡಿ ಮ್ಹಾಲಿಕರಿಗೆ ತೆರಿಗೆ ವಿನಾಯಿತಿ ನೀಡಲು  ಸದಸ್ಯರ ಒತ್ತಾಯ 

ಕುಂದಾಪುರ: ಕೊರೋನಾ ಮಹಾಮಾರಿಯಿಂದಾಗಿ ಇಡೀ ಆರ್ಥಿಕ ವ್ಯವಸ್ಥೆಯೇ ಕಂಗೆಟ್ಟಿದ್ದು, ಪುರಸಭೆಯ ಬಾಡಿಗೆ ಕಟ್ಟಡದ ಅಂಗಡಿ ಮಾಲೀಕರೆಲ್ಲರೂ ವ್ಯಾಪಾರ-ವ್ಯವಹಾರವಿಲ್ಲದೇ ದಿಕ್ಕೆಟ್ಟು ಕೂತಿದ್ದಾರೆ. ಈಗಾಗಲೇ ವ್ಯಾಪಾರಸ್ಥರು ತೆರಿಗೆ ವಿನಾಯಿತಿಯ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಮಾನವೀಯ ನೆಲೆಯಲ್ಲಾದರೂ ಅವರ ಸಂಕಷ್ಟಗಳನ್ನು ಅರಿತುಕೊಂಡು ವಿನಾಯಿತಿ ನೀಡಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು.

ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಕೊರೋನಾ ಹಿನ್ನೆಲೆ ಮೀನು ಮಾರುಕಟ್ಟೆ ಬಂದಾಗಿದ್ದು, ಇದರ ಏಲಂ ಪಡೆದವರಿಗೆ ಸಾಕಷ್ಟು ನಷ್ಟವಾಗಿದೆ. ಅವರು ಈಗ ಬಾಕಿ ಹಣಕಟ್ಟುವ ಸ್ಥಿತಿಯಲ್ಲಿಲ್ಲ. ಏಲಂ ಪಡೆದವರಿಗೂ ವಿನಾಯತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು.

ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಪುರಸಭೆ ತೆರಿಗೆ ವಸೂಲಿ ಮಾಡಿಲ್ಲ, ಸಕಾರ್ರಕ್ಕೂ ತೆರಿಗೆ ವಸೂಲಿಯಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದೇವೆ. ಸುದೀರ್ಘ ಬಾಡಿಗೆ ಪಡೆದ ಕಟ್ಟಡ ವ್ಯಾಪಾರಸ್ಥರ ತೆರಿಗೆ ಕಡಿತ ಅಸಾಧ್ಯ ಎನ್ನುವ ಉತ್ತರ ಬಂದಿದ್ದು, ವ್ಯಾಪಾರಸ್ಥರು ತೆರಿಗೆ ನೀಡುವ ಭರವಸೆ ನೀಡಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಶೇ.90ರಷ್ಟು ತೆರಿಗೆ ಸಂಗ್ರಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮೀನು ಮಾರುಕಟ್ಟೆ ವ್ಯಪಾರಸ್ಥರ ಸಂಕಷ್ಟಕ್ಕೂ ಪುರಸಭೆ ಮುಂದಾಗಬೇಕೆಂದು ಒತ್ತಾಯಿಸಿದ್ದು, ಸದಸ್ಯರಾದ ರಾಘವೇಂದ್ರ ಖಾರ್ವಿ, ಚಂದ್ರಶೇಖರ ಖಾರ್ವಿ, ಪ್ರಭಾಕರ ವಿ, ಶ್ರೀಧರ ಶೇರಿಗಾರ್, ಹಿರಿಯ ಸದಸ್ಯ ಮೋಹನದಾಸ ಶೆಣೈ ಇದಕ್ಕೆ ಪೂರಕವಾಗಿ ಮಾತನಾಡಿದರು.

ಕಳೆದ ಸಮಾನ್ಯ ಸಭೆಯಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಕೂರಿಸಿದ ಗೂಡಂಗಡಿ ಜಾಗ ಪಿಡ್ಲ್ಯೂಡಿ ಇಲಾಖೆಗೆ ಸಂಬಂಧಿಸಿದ್ದು ಎಂದು ಶಾಸಕರು ಹೇಳಿದ ಮೇಲೂ ಅವರ ಹೇಳಿಕೆಯನ್ನು ನಿರ್ಣಯದಲ್ಲಿ ಸೇರಿಸಿಲ್ಲ ಎಂದು ಚಂದ್ರಶೇಖರ ಖಾರ್ವಿ ವಿಷಯ ಪ್ರಸ್ತಾಪಿಸಿದರು. ಚಂದ್ರಶೇಖರ್ ಖಾರ್ವಿ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ನಡುವೆ ಸದಸ್ಯರ ನಡುವೆ ವಾಗ್ವಾದ ನಡೆದು ಸಭೆಯಿಂದ ನಿರ್ಗಮಿಸುವ ತನಕವೂ ಮುಂದುವರೆಯಿತು. ಕೊನೆಗೆ ನಿರ್ಣಯದಲ್ಲಿ ಶಾಸಕರ ಹೇಳಿಕೆ ದಾಖಲಿಸುವ ಮೂಲಕ ಸಭೆ ಶಾಂತವಾಗಿ ಮುಂದುವರಿಯಿತು.

ಕೋಡಿ ಒಳಚರಂಡಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೋಡಿ ಸಮಸ್ಯೆ ಅಸ್ಫಕ್, ಕಮಲಾ ಮಂಜುನಾಥ ಪೂಜಾರಿ, ಗಿರೀಶ್ ದೇವಾಡಿಗ, ಪ್ರಭಾಕರ ವಿ, ಸಂತೋಷ ಕುಮಾರ್ ಶೆಟ್ಟಿ, ನಾಮನಿರ್ದೇಶಕ ಸದಸ್ಯರಾದ ಪ್ರಕಾಶ್ ಖಾರ್ವಿ, ಪುಷ್ಪಾ ಶೇಟ್, ರತ್ನಾಕರ ಶೇರಿಗಾರ್ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.


Spread the love