ಕುಂದಾಪುರ, ಬೈಂದೂರಿನಲ್ಲಿ ಶಾಂತಿಯುತ ಮತದಾನ

Spread the love

ಕುಂದಾಪುರ, ಬೈಂದೂರಿನಲ್ಲಿ ಶಾಂತಿಯುತ ಮತದಾನ

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಬೆಳಿಗ್ಗೆಯಿಂದ ಬಿರುಸಿನ ಮತದಾನ ನಡೆಯಿತು. ಕೆಲಕಡೆ ತಾಂತ್ರಿಕ ಸಮಸ್ಯೆಗಳಿಂದ ಮತದಾನ ಪಕ್ರಿಯೆ ವಿಳಂಬವಾಗಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

ಬೈಂದೂರು ವಿಧಾನಸಭಾ ವ್ಯಾಪ್ತಿಯ ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ, ನಾಡ, ಮರವಂತೆ, ನಾವುಂದ, ಉಪ್ಪುಂದ, ಬೈಂದೂರು, ಶಿರೂರು, ಕಾಲ್ತೋಡು ಭಾಗದಲ್ಲಿ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಬಹುತೇಕ ಕಡೆಗಳಲ್ಲಿ ಸರತಿ ಸಾಲುಗಳು ಕಂಡುಬಂದವು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಹಾಲಾಡಿ, ಕೋಟ ಇನ್ನಿತರ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.

ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಪತ್ನಿ ಹಾಗೂ ಕುಟುಂಬದವರೊಡನೆ ಹಟ್ಟಿಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕನ್ಯಾನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತವನ್ನು ಚಲಾಯಿಸಿದರು. ಈ ಮತಗಟ್ಟೆಯಲ್ಲಿ ಕೆ. ಗೋಪಾಲ ಪೂಜಾರಿಯವರು ಪ್ರಥಮ ಮತದಾರರಾಗಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಇವಿಎಂ ಯಂತ್ರದ ಬಳಿ ಬೆಳಕಿನ ವ್ಯವಸ್ಥೆ ಸರಿಯಾಗಿದರ ಕಾರಣ ಅಭ್ಯರ್ಥಿಯ ಹೆಸರು, ಚಿಹ್ನೆ ಗೊಂದಲಕ್ಕೀಡಾಗುವ ಸಾಧ್ಯತೆಯನ್ನು ಮನಗಂಡು ಅಧಿಕಾರಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಲು ತಿಳಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಬಿಜೂರಿನ ಕಂಚಿಕಾನ್ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದರು. ಸರತಿ ಸಾಲಿನಲ್ಲಿ ಬಂದು ಮತದಾನ ಮಾಡಿದ ಗುರುರಾಜ್ ಗಂಟಿಹೊಳೆ ಬಳಿಕ ಹೊರಗಡೆ ಬಂದು ಕೈಬೆರಳಿನ ಶಾಯಿ ಪ್ರದರ್ಶಿಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಮತ ಚಲಾಯಿಸಿದರು.

ನಟ ನಿರ್ದೇಶಕ ರಿಷಬ್ ಶೆಟ್ಟಿ ಬೈಂದೂರು ವಿಧಾನಭಾ ವ್ಯಾಪ್ತಿಯ ಕೆರಾಡಿ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು. ಸಿನೆಮಾ ಕಥೆ ಬರೆಯುವಲ್ಲಿ ಬ್ಯುಸಿಯಾಗಿದ್ದ ಅವರು ಬಿಡುವು ಮಾಡಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ರಿಷಬ್ ಮತದಾನ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆಯೇ ಮತಗಟ್ಟೆ ಸಮೀಪದಲ್ಲಿದ್ದ ಅಭಿಮಾನಿಗಳು ಸೆಲ್ಫಿಗೆ ಮುಂದಾದರು.


Spread the love

Leave a Reply

Please enter your comment!
Please enter your name here