ಕುಂದಾಪುರ: ಮಗುಚಿ ಬಿದ್ದ ನಾಡ ದೋಣಿ – ಮೂವರು ಮೀನುಗಾರರ ರಕ್ಷಣೆ

Spread the love

ಕುಂದಾಪುರ: ಮಗುಚಿ ಬಿದ್ದ ನಾಡ ದೋಣಿ – ಮೂವರು ಮೀನುಗಾರರ ರಕ್ಷಣೆ

ಕುಂದಾಪುರ: ಜಿಲ್ಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿ ಬಿದ್ದಿದ್ದು, ದುರ್ಘಟನೆ ಸಂಭವಿಸಿದ ದೋಣಿಯಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ.

ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಹೊಸಪೇಟೆ ನಿವಾಸಿ ನಾಗ ಖಾರ್ವಿ (54), ಹೊಸಾಡು ಗ್ರಾಮದ ಭಗತ್ ನಗರ ನಿವಾಸಿ ನಿತ್ಯಾನಂತ ಖಾರ್ವಿ (47) ಮತ್ತು ಗುಜ್ಜಾಡಿ ಗ್ರಾಮದ ರೋಶನ್ (37) ರಕ್ಷಿಸಲ್ಪಟ್ಟ ಮೀನುಗಾರರಾಗಿದ್ದಾರೆ.

ತ್ರಾಸಿ ಹೊಸಪೇಟೆ ಗ್ರಾಮದ ನಾಗ ಖಾರ್ವಿ ಅವರ ಶ್ರೀ ಯಕ್ಷೇಶ್ವರಿ ಅನುಗ್ರಹ ಎಂಬ ದೋಣಿಯಲ್ಲಿ ಮುಂಜಾನೆ ಮೂವರು ಮೀನುಗಾರಿಕೆಗೆ ತೆರಳಿದ್ದರು. ಹೊಸಪೇಟೆ ಸಮೀಪದ ಕಡಲಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಬೆಳಗ್ಗೆ 7.30ರ ಸುಮಾರಿಗೆ ಭಾರೀ ಗಾಳಿ ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿಯು ನಿಯಂತ್ರಣ ತಪ್ಪಿ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ಇದನ್ನು ನೋಡಿದ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗಳಲ್ಲಿದ್ದವರು ಅವಘಡಕ್ಕೊಳಗಾದ ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ರಕ್ಷಿಸಿದ್ದಾರೆ.
ದೋಣಿ, ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಸುಮಾರು 3ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.


Spread the love