ಕುಂದಾಪುರ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Spread the love

ಕುಂದಾಪುರ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕುಂದಾಪುರ: ಮಾನವೀಯ ಗುಣಗಳೊಂದಿಗೆ ಸ್ವಾರ್ಥ ರಹಿತವಾದ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವುದನ್ನು ವಾಲ್ಮೀಕಿ ಮಹರ್ಷಿ ರಾಮಯಾಣ ಮಹಾಕಾವ್ಯದಲ್ಲಿ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಮಹರ್ಷಿ ವಾಲ್ಮೀಕಿಯಂತಹ ವಿಶೇಷ ವ್ಯಕ್ತಿತ್ವದ ವ್ಯಕ್ತಿಯೊಬ್ಬರನ್ನು ನಾಡಿಗೆ ಪರಿಚಯಿಸಿದ್ದೇ ರಾಮಾಯಣ ಎನ್ನುವ ಮಹಾಕಾವ್ಯ. ಆದರ್ಶತೆ ಹಾಗೂ ತತ್ವ ಪಾಲನೆಯ ಅಂಶಗಳನ್ನು ವಿಶ್ವಕ್ಕೆ ಸಾರಿದ ಮಹರ್ಷಿ ವಾಲ್ಮೀಕಿ ಅವರು, ಸಮಾಜ ಸುಧಾರಕ, ತತ್ವಜ್ಞಾನಿ, ಚಿಂತಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞರೂ ಆಗಿದ್ದರು. ಪ್ರಾಚೀನ ಭಾರತದ ಜೀವನಕ್ರಮ, ಸಂಸ್ಕೃತಿ ಹಾಗೂ ಬದುಕಿನ ಶೈಲಿಗಳನ್ನು ರಾಮಾಯಣದ ಒಳಗೆ ಸಾದರ ಪಡಿಸಿದ್ದಾರೆ. ಮನುಕುಲದ ಭವಿಷ್ಯದ ಉಳಿವಿನ ಪರವಾದ ಚಿಂತನೆಗಳನ್ನು ಹೊಂದಿದ್ದ ಬುದ್ದ, ಬಸವ, ಕನಕದಾಸ, ಪುರಂದರದಾಸ, ವಾಲ್ಮೀಕಿಯಂತಹ ಪುಣ್ಯ ಪುರುಷರ ನೆನಪುಗಳು ಕೇವಲ ಆಚರಣೆಗೆ ಸೀಮಿತವಾಗದೆ, ಸಮಗ್ರ ಸಮಾಜದ ವಿಚಾರಧಾರೆಗಳಾಗಿ ಪರಿವರ್ತಿತವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು.ಕೆ ಅವರು, ಜಗತ್ತಿನಾದ್ಯಂತ ಅನೇಕ ಶ್ರೇಷ್ಠ ಮಹಾಕಾವ್ಯಗಳು ರಚನೆಯಾಗಿದೆ. ಆದರೆ ಭಾರತದ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯಗಳಾಗಿ ಇಂದಿಗೂ ಗುರುತಿಸಿಕೊಂಡಿದೆ. ಸಾಧಿಸುವ ಮನಸ್ಸಿದ್ದಲ್ಲಿ, ನಾವು ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಬೇಡನಾಗಿದ್ದ ವಾಲ್ಮೀಕಿ ಮಹರ್ಷಿಯಾದ ಬದಲಾವಣೆಗಳೇ ಉತ್ತಮ ಉದಾಹರಣೆಯಾಗಿದೆ. ಮಹಾತ್ಮರ ಆಚರಣೆ ಅವರ ಬದುಕಿನ ಹೆಜ್ಜೆಗಳನ್ನು ನೆನಪಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ, ಅವರ ಆದರ್ಶತೆಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆಯಾದಾಗ ಮಾತ್ರ ಆಚರಣೆ ಹಾಗೂ ಪುಣ್ಯ ಸ್ಮರಣೆಗಳು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ, ಕುಂದಾಪುರ ತಹಸೀಲ್ದಾರ್ ಕಿರಣ್ ಗೌರಯ್ಯ, ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಕೆ.ಶ್ರೀಕಾಂತ್ ಇದ್ದರು.

ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಚೇತನ ಶ್ರೀನಿವಾಸ ನಾಯಕ್, ರಶ್ಮಿತಾ, ಕೇಶವ ಹಾಗೂ ವಿಜಯ ಕುಮಾರ್ ಅವರನ್ನು ಉಪ ವಿಭಾಗಾಧಿಕಾರಿ ರಾಜು.ಕೆ ಹಾಗೂ ಡಿವೈಎಸ್ಪಿ ಕೆ.ಶ್ರೀಕಾಂತ ಗೌರವಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್.ವೇರ್ಣೇಕರ ಸ್ವಾಗತಿಸಿದರು, ಪ್ರಕಾಶ ಪ್ರಾರ್ಥಿಸಿದರು, ರಾಧಿಕಾ ರಾಣಿ, ಉಮಾಕಾಂತಿ, ದೀಪಾ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ರಮೇಶ್ ವಂದಿಸಿದರು.


Spread the love