ಕುಂದಾಪುರ: ಮೀನು ವ್ಯವಹಾರದಲ್ಲಿ 16.65 ಲಕ್ಷ ರೂ ವಂಚನೆ; ಪ್ರಕರಣ ದಾಖಲು

Spread the love

ಕುಂದಾಪುರ: ಮೀನು ವ್ಯವಹಾರದಲ್ಲಿ 16.65 ಲಕ್ಷ ರೂ ವಂಚನೆ; ಪ್ರಕರಣ ದಾಖಲು

ಕುಂದಾಪುರ: ದೇವಲ್ಕುಂದ ಗ್ರಾಮದಲ್ಲಿ ಕಾರ್ಯಚರಿಸುತ್ತಿರುವ ಮೀನು ವ್ಯವಹಾರದ ಕಂಪೆನಿಗೆ ಸುಮಾರು 16.65 ಲಕ್ಷ ರೂ ಬಾಕಿ ಹಣವನ್ನು ನೀಡದೇ ಗುಜರಾತ್ ನ ವ್ಯಕ್ತಿಯೋರ್ವ ಸತಾಯಿಸುತ್ತಿರುವ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ದೇವಲ್ಕುಂದ ಗ್ರಾಮದಲ್ಲಿ ಕಾರ್ಯಾ ಚರಿಸುತ್ತಿರುವ ಮಲ್ಪೆ ಫ್ರೆಶ್ ಮರೈನ್ ಎಕ್ಸ್ಪೋರ್ಟ್ ಪ್ರೈವೆಟ್ ಲಿ. ಎಂಬ ಹೆಸರಿನ ಮೀನು ಸ್ಟೋರೇಜ್ ಹಾಗೂ ಮೀನು ರಫ್ತು ಪ್ಯಾಕ್ಟರಿಯಲ್ಲಿ ಚೀನಾದ ಪುಜಿಯನ್ ಪ್ರವಿನ್ಸ್ ಚೂಸನ್ ಇಂಪೋರ್ಟ್ ಆಯಂಡ್ ಎಕ್ಸ್ಪೋರ್ಟ್ ಟ್ರೇಡ್ ಕಂಪೆನಿ ಪರವಾಗಿ ಮೀನು ಖರೀದಿಸಿದ ಗುಜರಾತ್ನ ಇಲಿಯಾಸ್ ವಜೀರ್ ಎಂಬಾತ ಇದರ ಬಾಬ್ತು 16.65 ಲಕ್ಷ ರೂ.ಗಳ ಬಾಕಿ ಹಣವನ್ನು ನೀಡದೇ ಸತಾಯಿಸುತ್ತಿರುವುದಾಗಿ ಫಿಶ್ ಪ್ಯಾಕ್ಟರಿಯ ಮುಖ್ಯ ಲೆಕ್ಕಾಧಿಕಾರಿ ರತ್ನಾಕರ ಎಂಬವರು ದೂರು ದಾಖಲಿಸಿದ್ದಾರೆ.
ಆರೋಪಿಯು 2021ರ ಆ.12ರಂದು ಚೀನಾ ಮೂಲದ ಕಂಪೆನಿಗೆ 4 ಕಂಟೇನರ್ ಮೀನನ್ನು ಕಳುಹಿಸಿಕೊಡು ವಂತೆ ಇ-ಮೇಲ್ ಮುಖಾಂತರ ಆರ್ಡರ್ ಕಳುಹಿಸಿ ಕೊಟ್ಟಿದ್ದು, ಇದರಂತೆ ಅದೇ ವರ್ಷದ ಸೆಪ್ಟಂಬರ್ 10ರಂದು ಒಟ್ಟು 1,03,670 ಕೆ.ಜಿ. ಮೀನನ್ನು ಹಡಗಿನಲ್ಲಿ ಕಳುಹಿಸಿಕೊಡಲಾಗಿತ್ತು. ಇದರ ಬಾಬು ಒಟ್ಟು 1,33,68,712 ರೂ. ಹಣವನ್ನು ಕೊಡಬೇಕಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೀನು ಖರೀದಿಸಿದ ಕಂಪೆನಿ ಆ.22ರಂದು 53,91,036 ರೂ. ಹಾಗೂ 2022ರ ಫೆ.22ರಂದು 64,62,840 ರೂ.ಗಳನ್ನು ಪ್ಯಾಕ್ಟರಿ ಖಾತೆಗೆ ಪಾವತಿಸಿತ್ತು. ಆದರೆ ಬಾಕಿ ಉಳಿದ 16,65,594ರೂ. ಪಾವತಿಸಿ ರಲಿಲ್ಲ. ಈ ಬಗ್ಗೆ ಆರೋಪಿ ಬಳಿ ವಿಚಾರಿಸಿದಾಗ ಹಣ ನೀಡದೇ ಸತಾಯಿಸುತ್ತಿರುವುದಾಗಿ ಕಂಪೆನಿಯ ವಿವರ, ವಿಳಾಸ, ಸಂಪರ್ಕ ಸಂಖ್ಯೆ ನೀಡುತ್ತಿಲ್ಲ. ಆರೋಪಿಯು ಬಾಕಿ ಹಣ ನೀಡದೇ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love