ಕುಂದಾಪುರ: ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ-2023 ಕ್ಕೆ ಚಾಲನೆ

Spread the love

ಕುಂದಾಪುರ: ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ-2023 ಕ್ಕೆ ಚಾಲನೆ

ಕುಂದಾಪುರ: ಸಮಬಾಳು, ಸಮಪಾಲು ಎನ್ನುವ ತತ್ವಾದರ್ಶಗಳಲ್ಲಿ ನಂಬಿಕೆಯನ್ನು ಇರಿಸಿಕೊಂಡು ರಾಷ್ಟ್ರಪ್ರೇಮ ಹಾಗೂ ರಾಷ್ಟ್ರೀಯ ಭಾವೈಕ್ಯತೆಯ ನೆಲೆಯಲ್ಲಿ ದೇಶ ಸೇವೆ ಮಾಡುತ್ತಿರುವ ಭಾರತ್ ಸೇವಾದಳದ ಚಿಂತನೆಗಳು ದೇಶಾದ್ಯಂತ ಅನಾವರಣಗೊಳ್ಳುತ್ತಿರುವುದರಿಂದ ದೇಶ ಭಕ್ತಿ, ರಾಷ್ಟ್ರಧ್ವಜ, ರಾಷ್ಟ್ರ ಗೀತೆ ಹಾಗೂ ರಾಷ್ಟ್ರೀಯ ಹಬ್ಬದಾಚರಣೆಗಳ ಮೇಲಿನ ಗೌರವಗಳು ಹೆಚ್ಚುತ್ತಿದೆ ಎಂದು ಉಡುಪಿ ಜಿಲ್ಲಾ ಭಾರತ್ ಸೇವಾದಳ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನೆಲ್ಲಿಕಟ್ಟೆಯ ಜೈ ಭಾರತಿ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾ ಭಾರತ್ ಸೇವಾದಳ ಸಮಿತಿ, ಕುಂದಾಪುರ ತಾಲ್ಲೂಕು ಭಾರತ್ ಸೇವಾದಳ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಆಶ್ರಯದಲ್ಲಿ ನೆಲ್ಲಿಕಟ್ಟೆ ಶಾಲೆಯ ಸಹಕಾರದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ-2023 ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಮಕ್ಕಳಲ್ಲಿ ದೇಶ ಭಕ್ತಿ, ಸೌಹಾರ್ದತೆಯ ಬದುಕು ಹಾಗೂ ರಾಷ್ಟ್ರಪ್ರೇಮವನ್ನು ಕಲಿಸುವುದರಿಂದ ಭವಿಷ್ಯದಲ್ಲಿ ಒಳ್ಳೆಯ ಸುದೃಢ ಸಮಾಜ ಮಾಗೂ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಭಾರತ್ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳು ಈ ಕಾರ್ಯಗಳನ್ನು ಮಾಡುತ್ತಿರುವುದು ಅತ್ಯಂತ ಸುತ್ಯರ್ಹ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕುಂದಾಪುರ ತಾಲ್ಲೂಕು ಭಾರತ್ ಸೇವಾದಳ ಸಮಿತಿಯ ಅಧ್ಯಕ್ಷ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರು, ಮಕ್ಕಳಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವ ಮಕ್ಕಳ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು ಎನ್ನುವ ಚಿಂತನೆಗಳು ನಮಗಿತ್ತು. ಆದರೇ ಕೋವಿಡ್ ಮುಂತಾದ ಕಾರಣಗಳಿಂದಾಗಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಬಿದ್ದಿರುವ ಆಘಾತಗಳಿಂದ ಶಿಕ್ಷಣ ವಲಯ ಪುನರ್ ಸಂಘಟಿತವಾಗುತ್ತಿರುವುದರಿಂದಾಗಿ ಈ ಬಾರಿ ಸಾಂಕೇತಿಕವಾಗಿ ಮೇಳದ ಆಯೋಜನೆ ಮಾಡಲಾಗಿದೆ. ಮುಂದಿನ ವರ್ಷದಿಂದ ತಾಲ್ಲೂಕಿನ ಎಲ್ಲ ಮಕ್ಕಳಿಗೂ ಭಾಗವಹಿಸಲು ಅನುಕೂಲವಾಗುವಂತೆ ಮಕ್ಕಳ ಮೇಳವನ್ನು ಸಂಘಟಿಸಲಾಗುವುದು ಎಂದರು.

ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಉದಯ್ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸೇವಾದಳ ರಾಜ್ಯ ಸಮಿತಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ರಾಜೇಶ್ ಕೆ.ಸಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಸತೀಶ್ ಶೆಟ್ಟಿ ಹಡಾಳಿ, ಉದ್ಯಮಿ ಸಂತೋಷ್ಕುಮಾರ ಶೆಟ್ಟಿ ಆರ್ಡಿ ಮಾತನಾಡಿದರು.

ತಾಲ್ಲೂಕು ಕ್ರೀಡಾ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಉದ್ಯಮಿ ಕೆ.ಗಣಪಯ್ಯ ಶೆಟ್ಟಿ, ಜಯರಾಮ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಪಾರು ಕಿರಣ್ಕುಮಾರ ಹೆಗ್ಡೆ, ಶಾರದೋತ್ಸವ ಸಮಿತಿ ಗೌರವ ಅಧ್ಯಕ್ಷ ಪ್ರದೀಪ್ಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಆಶೋಕ, ಗಣೇಶ್ ಮೊಗವೀರ, ನಿವೃತ್ತ ಶಿಕ್ಷಕ ಕೆ.ಆನಂದ ಶೆಟ್ಟಿ, ಶಿಕ್ಷಕರಾದ ಜಗನ್ನಾಥ ಶೆಟ್ಟಿ, ಪ್ರಕಾಶ್ ಮೂಡಬಗೆ ಇದ್ದರು.

ಕೆ.ಉದಯ್ಕುಮಾರ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಮೆರವಣಿಗೆ ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಲಕ್ಷ್ಮೀ ಶೆಟ್ಟಿ ಗೌರವ ರಕ್ಷೆ ಸ್ವೀಕರಿಸಿದರು. ವಿವಿಧ ಶಾಲೆಯ ಭಾರತ್ ಸೇವಾದಳ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಭಾರತ್ ಸೇವಾದಳದ ಸ್ವಯಂ ಸೇವಕರು, ವಾದ್ಯ ವೃಂದ, ಚಂಡೆ ಹಾಗೂ ವೇಷಭೂಷಣಗಳೊಂದಿಗೆ ನೆಲ್ಲಿಕಟ್ಟೆಯ ಪೇಟೆಯಲ್ಲಿ ಆಕರ್ಷಕ ಪುರ ಮೆರವಣಿಗೆ ನಡೆಯಿತು. ಮಕ್ಕಳಿಂದ ಸಾಮೂಹಿಕ ವ್ಯಾಯಾಮ, ಕವಾಯತ್ ಹಾಗೂ ನೃತ್ಯಗಳ ಪ್ರದರ್ಶನ ನಡೆಯಿತು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ್ಕುಮಾರ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು, ಭಾರತ್ ಸೇವಾದಳ ಜಿಲ್ಲಾ ಸಂಘಟಕ ಪಕೀರ ಗೌಡ ಹಳೆಮನೆ ಗೌರವ ರಕ್ಷೆ ನೀಡಿದರು, ಭಾರತ್ ಸೇವಾದಳ ಶಿಕ್ಷಕಿ ಸುಮನಾ ಕುಂದಾಪುರ ನಿರೂಪಿಸಿದರು.


Spread the love