ಕುಂದಾಪುರ: ರಿವಾಲ್ವರ್ ತೋರಿಸಿ ಮೊಬೈಲ್ ಶಾಪ್ ಮಾಲೀಕನ ಅಪಹರಣ

Spread the love

ಕುಂದಾಪುರ: ರಿವಾಲ್ವರ್ ತೋರಿಸಿ ಮೊಬೈಲ್ ಶಾಪ್ ಮಾಲೀಕನ ಅಪಹರಣ

ಕುಂದಾಪುರ: ಇಲ್ಲಿನ ಮೊಬೈಲ್ ಶಾಪ್ ಮಾಲೀಕನೋರ್ವನನ್ನು ಅಪಹರಿಸಿ ನಗದು ಹಾಗೂ ಬೆಲೆಬಾಳುವ ಮೊಬೈಲ್ ಗಳನ್ನು ದೋಚಿ ದುಷ್ಕರ್ಮಿಗಳ‌ ತಂಡವೊಂದು‌ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ‌ ಹಳೆ ಬಸ್ಸು ನಿಲ್ದಾಣದ ಬಳಿಯ ಚಿಕನ್ ಸಾಲ್ ರಸ್ತೆಯಲ್ಲಿರುವ ಮೊಬೈಲ್ ಎಕ್ಸ್ ಮೊಬೈಲ್ ಶಾಪ್‌ ಮಾಲೀಕ‌, ಅರೆಹೊಳೆ ಕ್ರಾಸ್ ನಿವಾಸಿ ಮುಸ್ತಾಫ್ (34) ಅಪಹರಣಕ್ಕೊಳಗಾದವರು. ಸದ್ಯ ಮುಸ್ತಫಾ ಅವರು ಅಪಹರಣಕಾರಿಂದ ಬಿಡುಗಡೆಗೊಂಡು ಬಂದಿದ್ದು ಆರೋಪಿ‌ ನೇರಂಬಳ್ಳಿ ನಿವಾಸಿ ಮುಕ್ತಾರ್ ಹಾಗೂ ತಂಡ ಒಟ್ಟು 4,64,175 ರೂಪಾಯಿ ಹಣವನ್ನು ಹಾಗೂ 1,00,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿರುವುದ್ದಾರೆಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ಘಟನೆಯ ವಿವರ: ಪ್ರಸ್ತುತ‌ ಕುಂದಾಪುರ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ಮುಸ್ತಾಫ್ ಎಂದಿನಂತೆ ಶುಕ್ರವಾರ 9:30 ಕ್ಕೆ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಹಣ ಹಾಗೂ ಇನ್ನಿತರ ಅಮೂಲ್ಯ ದಾಖಲಾತಿಯೊಂದಿಗೆ ತಾವು ಬಳಸುವ ಐಫೋನ್, ಸ್ಯಾಮಸಂಗ್ ಮೊಬೈಲ್ ಫೋನ್, ಆಪಲ್ ಸ್ಮಾರ್ಟ್ ವಾಚ್, ಏರ್ ಪೋಡ್ ಅನ್ನು ಬ್ಯಾಗಿನೊಳಗೆ ಹಾಕಿ ದ್ವಿಚಕ್ರ ವಾಹನದಲ್ಲಿ ಫ್ಲ್ಯಾಟ್ ಗೆ ಹೋಗುತ್ತಿದ್ದಾಗ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳ‌ ತಂಡವೊಂದು ಅಡ್ಡಗಟ್ಟಿದೆ.

ಸ್ವಿಪ್ಟ್ ಕಾರಿನ ಚಾಲಕ ಆರೋಪಿ ಕುಂದಾಪುರ ನೇರಂಬಳ್ಳಿ ನಿವಾಸಿ ಮುಕ್ತಾರ್ ಹಾಗೂ ಕಾರಿನೊಳಗಿದ್ದ ತಂಡ ಕಾರಿನಿಂದ ಕೆಳಗೆ ಇಳಿದು ಮುಸ್ತಾಫಾ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಕಾರಿನೊಳಗೆ ಎಳೆದೊಯ್ದು ರಿಲಾಲ್ವರ್‌ ಅನ್ನು ತೋರಿಸಿ ಬೆದರಿಕೆ ಹಾಕಿದ್ದಲ್ಲದೇ, ಕೈ ಹಾಗೂ ಬಾಯಿಯನ್ನು ಕಟ್ಟಿ ಕೂಗದಂತೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ತಂಡ ಸೇರಿಕೊಂಡ ಓರ್ವ ಮಹಿಳೆ ಸರ್ಜಾಪುರದ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಕುಂದಾಪುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆಯಲ್ಲಿ ಬೆಂಗಳೂರಿನ ಎಟಿಎಮ್‌ ಹಾಗೂ ಸ್ವೈಪಿಂಗ್ ಮೆಷಿನ್‌ ನಿಂದ ರೂಪಾಯಿ 3,14,175 ರೂಪಾಯಿಯನ್ನು ಡ್ರಾ ಮಾಡಿದ್ದಲ್ಲದೇ ಆರೋಪಿತರು ಮುಸ್ತಫಾ ಅವರ ಎಕ್ಸಿಸ್ ಬ್ಯಾಂಕ್‌ನ ಚೆಕ್ ಪುಸ್ತಕವನ್ನು ತೆಗೆದುಕೊಂಡು ಸಹಿ ಮಾಡಲು ಹೇಳಿ ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು. ಜಮಾ ಮಾಡಿದರೆ ಮಾತ್ರ ದಾಖಲೆಗಳನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳ ಹಿಂತಿರುಗಿಸುವುದಾಗಿ ಹೇಳಿದ್ದಾರೆಂದು ಮುಸ್ತಫಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶನಿವಾರ ರಾತ್ರಿ 9:30 ಗಂಟೆಗೆ ಆರೋಪಿತರು ಮುಸ್ತಫಾ ಅವರನ್ನು ಬಿಟ್ಟಿದ್ದು ಭಾನುವಾರದಂದು ಅವರು ಊರಿಗೆ ಬಂದಿದ್ದು ಆರೋಪಿತರೆಲ್ಲರೂ ಸೇರಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ಮಾಡಿ ಒಟ್ಟು 4,64,175 ರೂಪಾಯಿ ಹಣವನ್ನು ಹಾಗೂ ರೂಪಾಯಿ 1,00,000/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love