ಕುಂದಾಪುರ: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Spread the love

ಕುಂದಾಪುರ: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಕುಂದಾಪುರ: ಬೆಂಗಳೂರಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಪತ್ರಕರ್ತರ ಸೋಗಿನಲ್ಲಿ ಆಗಮಿಸಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿದ ಕೃತ್ಯವನ್ನು ಖಂಡಿಸಿ ಕುಂದಾಪುರ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಕಾರ್ಮಿಕ ಭವನದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿ ಮುಖಂಡ ಎಚ್ ನರಸಿಂಹ, ಬಿಜೆಪಿ ತನ್ನ ವೈಪಲ್ಯ ಮರೆಮಾಚಲು ಅಲ್ಪಸಂಖ್ಯಾತರ ಮೇಲೆ ಅವ್ಯಾಹತವಾಗಿ ಸರಣಿ ದಾಳಿ, ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಶಾಲಾ ಪಠ್ಯ ಪುಸ್ತಕಗಳಲ್ಲಿ ಸಂಘಪರಿವಾರ ನಾಯಕರ ಸೇರ್ಪಡೆ ವಿವಾದಗಳನ್ನುವಬೇಕಂತಲೇ ಸೃಷ್ಠಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಸರ್ಕಾರ ತನ್ನ ಗೂಂಡಾ ಕಾರ್ಯಕರ್ತರನ್ನು ಬಳಸಿ ಸರಕಾರ ರಕ್ಷಿಸಿಕೊಳ್ಳಲು ಇಂತಹ ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಬಿಜೆಪಿ ಸರ್ಕಾರವು ಈ ಹಿಂದೆ ರೈತರ ಹೋರಾಟಕ್ಕೆ ಮಣಿದು ರೈತರಿಗೆ ಕಾನೂನಿನಲ್ಲಿ ಬೆಂಬಲ ಬೆಲೆ ನೀಡಲು ಒಪ್ಪಿಕೊಂಡು ವಿಶ್ವಾಸ ದ್ರೋಹ ಬಗೆಯಿತು. ಮತ್ತೆ ಹೋರಾಟ ಹತ್ತಿಕ್ಕಲು ಗೂಂಡಾಗಳನ್ನು ಬಳಸಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರವಿದ್ದರೂ ನ್ಯಾಯಾಂಗ, ಪೊಲೀಸ್ ವ್ಯವಸ್ಥೆ ದುರ್ಬಲಗೊಳಿಸಿ ಕಾನೂನು ಕೈಗೆತ್ತಿಕೊಳ್ಳುವುದು ಅನಾಗರಿಕ ವರ್ತನೆಯಾಗಿದೆ. ಈ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡ ರಾಜೇಶ್ ವಡೇರಹೋಬಳಿ, ಸಿಐಟಿಯು ಹಿರಿಯ ಮುಖಂಡರಾದ ವಿ.ನರಸಿಂಹ, ಚಂದ್ರಶೇಖರ ವಿ ಇದ್ದರು.


Spread the love