ಕುಂದಾಪುರ: ಶಂಕಿತ ನಕ್ಸಲ್ ವಾದಿಗಳ ಪ್ರಕರಣದ ತನಿಖೆ ಸೆಕ್ಷನ್ ನ್ಯಾಯಾಲಯಕ್ಕೆ

Spread the love

ಕುಂದಾಪುರ: ಶಂಕಿತ ನಕ್ಸಲ್ ವಾದಿಗಳ ಪ್ರಕರಣದ ತನಿಖೆ ಸೆಕ್ಷನ್ ನ್ಯಾಯಾಲಯಕ್ಕೆ

ಕುಂದಾಪುರ: ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದ ಶಂಕಿತ ನಕ್ಸಲ್ ವಾದಿಗಳಾದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರ ಮೇಲಿನ 7 ಪ್ರಕರಣಗಳ ವಿಚಾರಣೆಯನ್ನು ಸೆಕ್ಷನ್ ನ್ಯಾಯಾಲಯಕ್ಕೆ ವರ್ಗಾಯಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ್ ಯಡಿಯಾಳ ಕೊಲೆ ಪ್ರಕರಣವೂ ಸೇರಿದಂತೆ ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 11 ಪ್ರಕರಣಗಳಿದ್ದು, ಶಂಕರನಾರಾಯಣ ಠಾಣಾ ವ್ಯಾಪ್ತಿಯ 6 ಹಾಗೂ ಕೊಲ್ಲೂರು ಠಾಣೆ ವ್ಯಾಪ್ತಿಯ 1 ಪ್ರಕರಣದ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಇವುಗಳಲ್ಲಿನ ಅಪರಾಧಗಳ ಸೆಕ್ಷನ್‌ಗಳು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವುದರಿಂದ 7 ಪ್ರಕರಣಗಳನ್ನು ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ನೀಡಲಾಗಿದೆ.

ಬಿ.ಜಿ. ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯದಲ್ಲಿ ತನ್ನ ಮೇಲೆ ಹೆಚ್ಚಿನ ಪ್ರಕರಣಗಳಿರುವುದರಿಂದ ತನ್ನನ್ನು ಕರ್ನಾಟಕದ ಜೈಲಿನಲ್ಲಿ ಇರಿಸಬೇಕೆಂದು ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ಸದ್ಯಕ್ಕೆ ಪುರಸ್ಕರಿಸಲಿಲ್ಲ.

ನ.10 ರಂದು ಕೇರಳ ರಾಜ್ಯದ ಗಡಿ ಭಾಗವಾದ ವಯನಾಡ್ ನ ಸುಲ್ತಾನ್ ಬತೇರಿಯಲ್ಲಿ ಕೇರಳ ರಾಜ್ಯದ ಭಯೋತ್ಪಾದನಾ ನಿಗ್ರಹ ಪಡೆಯಿಂದ ಬಂಧನಕ್ಕೆ ಒಳಗಾಗಿದ್ದ ಅವರನ್ನು ಫೆ.24 ರಂದು ಕೇರಳ ಪೊಲೀಸರು ಕರ್ನಾಟಕದ ಪೊಲೀಸರಿಗೆ ಹಸ್ತಾಂತರಿಸಿದ್ದರು. ರಾಜ್ಯದ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಚಿಕ್ಕಮಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕಾರ್ಕಳ, ಹೆಬ್ರಿ ಹಾಗೂ ಅಜೆಕಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ.3 ರಂದು ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ ಬಳಿಕ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಜಿಲ್ಲೆಯ ಕಾರ್ಕಳ ಹಾಗೂ ಹೆಬ್ರಿ ತಾಲ್ಲೂಕು ವ್ಯಾಪ್ತಿಯ ಪ್ರಕರಣದ ತನಿಖೆಯ ನಂತರ ಕುಂದಾಪುರ ತಾಲ್ಲೂಕಿನ ಅಮಾಸೆಬೈಲ್ ಠಾಣೆಯಲ್ಲಿ 2006 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು, ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಒಟ್ಟು 11 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದರು.

ಶಂಕಿತ ನಕ್ಸಲ್ ವಾದಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಕೀರ್ಣದ ಸುತ್ತ ವಿಶೇಷ ಪೊಲೀಸ್ ಭದ್ರತೆ ಮಾಡಲಾಗಿತ್ತು.


Spread the love