ಕುಂದಾಪುರ: ಸಮಾಜದ ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ – ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್

Spread the love

ಕುಂದಾಪುರ: ಸಮಾಜದ ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ – ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್

ಕುಂದಾಪುರ: ದುಶ್ಚಟಗಳಿಗೆ ತುತ್ತಾಗುತ್ತಿರುವ ಯುವ ಸಮುದಾಯದಿಂದಾಗಿ ಸಮಾಜದ ನೈರ್ಮಲ್ಯವೇ ಹಾಳಾಗುತ್ತಿರುವುದು ಖೇದಕರ. ಈ ಸಮಾಜದ ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಇದನ್ನು ಅರಿತುಕೊಂಡು ನಾವೆಲ್ಲರೂ ಮುಂದೆ ಸಾಗಬೇಕು ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ನೇತೃತ್ವದಲ್ಲಿ, ಡಾ.ಬಿ.ಬಿ.ಹೆಗ್ಡೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಗಾಂಜಾ ವಿರುದ್ಧ ಜಾಗೃತ ನಡಿಗೆ ‘ ವಾಕಥಾನ್ ‘ ಒಂದು ಹೆಜ್ಜೆ ಅಮುಲು ಮುಕ್ತ ಭಾರತಕ್ಕಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್ ಅವರು ಮಾತನಾಡಿ, ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಮಾದಕ ವ್ಯಸನದ ವಿರುದ್ಧ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮವನ್ನು ಮೂಡಿಸುವುದರಿಂದ ನ್ಯಾಯಾಲಯದ ಕೆಲಸಗಳು ಒಂದಷ್ಟು ಕಡಿಮೆಯಾಗುವ ವಿಶ್ವಾಸವಿದೆ. ವಿದ್ಯಾರ್ಥಿಗಳು ಸಂಘಟಿತ ಹೋರಾಟಗಳು ನಡೆಸುವುದರಿಂದ ಧನಾತ್ಮಕ ಬದಲಾವಣೆಗಳಾಗಿರುವ ದೃಷ್ಟಾಂತಗಳು ನಮ್ಮ ಮುಂದೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ನಡಿಗೆಯ ಮುಂಚೂಣಿಯಲ್ಲಿ ಇರುವುದು ಅರ್ಥಪೂರ್ಣವಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀನಾಥ ರಾವ್, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಉಮೇಶ್ ಶೆಟ್ಟಿ ಕೊತ್ತಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ, ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜನಸೇವಾ ಟ್ರಸ್ಟ್‌ನ ಪ್ರವೀಣ್ ಯಕ್ಷಿಮಠ, ಅರುಣ್‌ಕುಮಾರ ಶೆಟ್ಟಿ, ಲೋಕೇಶ್ ಅಂಕದಕಟ್ಟೆ, ಡಿ.ಜೆ ರಂಜು, ವಕೀಲರಾದ ಪ್ರಮೋದ್ ಹಂದೆ, ಕೃಷ್ಣರಾಜ್ ಶೆಟ್ಟಿ ಚೋರಾಡಿ, ರಾಜಾರಾಮ್ ಶೆಟ್ಟಿ, ಉಮೇಶ್ ಶೆಟ್ಟಿ ಶಾನ್ಕಟ್ಟು, ವಿಕಾಸ್ ಹೆಗ್ಡೆ ಕೊಳ್ಕೆರೆ ಇದ್ದರು.

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪ್ರಮುಖರು ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನು ಮಾಡುವ ಬದ್ಧತೆಯನ್ನು ತೋರಿದರು.

ಜನಸೇವಾ ಟ್ರಸ್ಟ್‌ನ ಉದಯ ಶೆಟ್ಟಿ ಪಡುಕೆರೆ ಸ್ವಾಗತಿಸಿದರು, ವಸಂತ ಗಿಳಿಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಕೆ.ಸಿ. ರಾಜೇಶ್ ನಿರೂಪಿಸಿದರು, ಉದಯ ಕುಮಾರ್ ಶೆಟ್ಟಿ ಕಾಳಾವರ ವಂದಿಸಿದರು.


Spread the love