ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಿನಿಂದ ಔಷಧಿ ತರಲು ಚೀಟಿ – ಸಾರ್ವಜನಿಕರ ಅಸಮಾಧಾನ

Spread the love

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಿನಿಂದ ಔಷಧಿ ತರಲು ಚೀಟಿ – ಸಾರ್ವಜನಿಕರ ಅಸಮಾಧಾನ

ಕುಂದಾಪುರ: ಕೋವಿಡ್-19 ಕಾಣಿಸಿಕೊಂಡ ಬಳಿಕ ಸ್ಥಾಪನೆಯಾದ ಜಿಲ್ಲೆಯ ಉಪ ವಿಭಾಗ ಮಟ್ಟದ ಏಕೈಕ ಸರ್ಕಾರಿ ಆಸ್ಪತ್ರೆ ಎನ್ನುವ ಹೆಗ್ಗಳಿಕೆಯೊಂದಿಗೆ, ಉತ್ತಮ ಚಿಕಿತ್ಸೆ, ಅಂತ:ಕರಣದ ಸೇವೆ, ದಾನಿಗಳ ಸಮನ್ವಯತೆ, ಸೋಂಕು ಗುಣಮಟ್ಟದಲ್ಲಿಯೂ ಉತ್ತಮ ನಿರ್ವಹಣೆ ಮುಂತಾದ ಕಾರಣಗಳಿಂದ ರಾಜ್ಯ ಮಟ್ಟದಲ್ಲಿಯೇ ಹೆಸರು ಪಡೆದಿರುವ ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಇದೀಗ ಔಷಧಿಯ ಕೊರತೆ ನೆಪದಲ್ಲಿ ಹೊರಗಿನಿಂದ ಔಷಧಿ ತರಲು ಚೀಟಿ ನೀಡಲಾಗುತ್ತಿದೆ ಎನ್ನುವ ಅಸಮಧಾನಗಳು ವ್ಯಕ್ತವಾಗುತ್ತಿದೆ.

ಅಂದಾಜು 120 ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಸ್ಪತ್ರೆಯ ಹೊಸ ಕಟ್ಟಡವನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗಳ ಸೌಲಭ್ಯಗಳು ಇದೆ. ರಾಜ್ಯದಲ್ಲಿಯೇ ಹೆಚ್ಚು ಸೋಂಕು ಪೀಡಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿ ಗುಣಪಡಿಸಿರುವ ಬಗ್ಗೆ ಸಾರ್ವಜನಿಕ ಪ್ರಶಂಸೆ ಇದೆ. ರೆಡ್‌ಕ್ರಾಸ್, ರೋಟರಿ, ಎಡ್ವರ್ಡ್ ಕ್ಲಬ್ ಹಾಗೂ ಅನೇಕ ದಾನಿಗಳು ಆಸ್ಪತ್ರೆಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲು ಸಹಕಾರ ನೀಡಿದ್ದಾರೆ.

ಆದರೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೊರೊನಾ ಸೋಂಕಿತರಿಗೆ ಅಗತ್ಯವಾಗಿರುವ ಔಷಧಿಗಳು ಆಸ್ಪತ್ರೆಯ ಗೋದಾಮಿನಲ್ಲಿ ಇಲ್ಲ. ಔಷಧಿಗಳು ಅಗತ್ಯಕ್ಕೆ ಸರಿಯಾಗಿ ಸರಬರಾಜುಗುತ್ತಿಲ್ಲ, ಆಸ್ಪತ್ರೆಯ ಆಡಳಿತೆ ಔಷಧಿಯನ್ನು ತರಿಸುವಲ್ಲಿ ನಿರ್ಲಕ್ಷ÷್ಯ ವಹಿಸುತ್ತಿದೆ. ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳನ್ನು ಹೊರಗಿನಿಂದ ತರಲು ಚೀಟಿ ನೀಡಲಾಗುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸ್ಥಳೀಯ ಔಷಧಿ ಅಂಗಡಿಗಳಲ್ಲಿ ದೊರಕುವ ಔಷಧಿಗಳು ಸರ್ಕಾರಿ ಆಸ್ಪತ್ರೆಗೆ ಏಕೆ ಸರಬರಾಜಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಈ ಕುರಿತು ಸ್ವಷ್ಟನೆ ನೀಡಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು, ಕೋವಿಡ್ ಆಸ್ಪತ್ರೆಯಿಂದ ಬೇಡಿಕೆ ಪಟ್ಟಿ ಬಂದ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಮೇಲ್ ಮಾಡುತ್ತೇವೆ. ಅಲ್ಲಿಂದ ಲಭ್ಯತೆಯ ಮಾಹಿತಿ ದೊರೆಕಿದ ತಕ್ಷಣ, ಔಷಧಿ ಇಲ್ಲ ಎಂದಾದರೇ, ಕೂಡಲೇ ಹೊರಗಿನಿಂದ ಖರೀದಿ ಮಾಡಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಖರೀದಿಗೆ ಯಾವುದೆ ರೀತಿಯ ಹಣಕಾಸಿನ ತೊಂದರೆ ಇಲ್ಲ. ಬೇಡಿಕೆಗೆ ಅನುಗುಣವಾಗಿ ಆರೋಗ್ಯ ನಿಧಿಯಿಂದ ಭರಿಸಲಾಗುತ್ತಿದೆ. ಕೆಲವೊಂದು ಬಾರಿ ಸ್ಥಳೀಯ ಮಾರುಕಟ್ಟೆಯಲ್ಲಿ ದೊರಕದ ಔಷಧಿಗಳನ್ನು ಬೇರೆ ಕಡೆಯಿಂದ ತರಿಸಲು 2-3 ದಿನಗಳಾಗಿದ್ದ ಬೆರಳೆಣಿಕೆಯ ಸಂದರ್ಭಗಳು ಎದುರಾಗಿದೆ. ರೋಗಿಗಳಿಗೆ ಹೊರಗಿನಿಂದ ಔಷಧ ತರಲು ಚೀಟಿ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಾಗಿರುವ ಔಷಧಿಗಳನ್ನು ಖರೀದಿ ಮಾಡಿಯಾದರೂ ನೀಡಬೇಕು. ಹೊರಗಿನಿಂದ ಔಷಧಿ ತರಲು ಚೀಟಿ ನೀಡುವಂತಿಲ್ಲ.ಇದಕ್ಕಾಗಿ ಹಣಕಾಸಿನ ಕೊರತೆಯೂ ಇಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯವರ ಮೂಲಕ ಔಷಧಿ ಪಡೆಯಲು ಸೂಚನೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಪರಸ್ಪರ ಸಮನ್ವಯ ಹಾಗೂ ಹೊಂದಾಣಿಕೆಯಲ್ಲಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ


Spread the love