ಕುಗ್ರಾಮದ ಸರ್ಕಾರಿ ಶಾಲೆಗೆ ಮೆರಗು ನೀಡಿದ ಉಪ್ಕ್ರತಿ

Spread the love

ಕುಗ್ರಾಮದ ಸರ್ಕಾರಿ ಶಾಲೆಗೆ ಮೆರಗು ನೀಡಿದ ಉಪ್ಕ್ರತಿ

ಮೈಸೂರು: ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮಾರುದ್ಧ ಭಾಷಣ ಬಿಗಿಯುವ ಹೆಚ್ಚಿನ ಮಂದಿ ಅವುಗಳ ಅಭಿವೃದ್ಧಿಯತ್ತ ಗಮನಹರಿಸುವುದೇ ಇಲ್ಲ. ಎಲ್ಲರೂ ಕೈ ಜೋಡಿಸಿದರೆ ತಮ್ಮ ಊರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಕಷ್ಟವೇನಲ್ಲ.

ಇವತ್ತಿಗೂ ಸರ್ಕಾರಿ ಶಾಲೆಗಳೆಂದ ತಕ್ಷಣ ನಮ್ಮ ಮುಂದೆ ಹಾದು ಹೋಗುವ ದೃಶ್ಯಗಳೇ ಬೇರೆ. ನಮ್ಮ ಸುತ್ತಮುತ್ತ ನೋಡಿರುವ ಶಾಲೆಗಳೇ ಕಣ್ಣಿನಲ್ಲಿ ಹಾದು ಹೋಗುತ್ತವೆ. ಇವತ್ತಿಗೂ ಬಹಳಷ್ಟು ಶಾಲೆಗಳ ಅಭಿವೃದ್ಧಿಯನ್ನೇ ಕಂಡಿಲ್ಲ. ಅದರಲ್ಲೂ ಕುಗ್ರಾಮಗಳಲ್ಲಿರುವ ಶಾಲೆಗಳ ಸ್ಥಿತಿ ಶೋಚನೀಯವಾಗಿವೆ.

ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಹಲವಷ್ಟು ಶಾಲೆಗಳು ಗ್ರಾಮಸ್ಥರ ಸಹಕಾರದಿಂದ, ಸಂಘಸಂಸ್ಥೆಗಳ ಮೂಲಕ ಅಭಿವೃದ್ಧಿ ಕಂಡಿವೆ. ಅವು ಖಾಸಗಿ ಶಾಲೆಗಳನ್ನು ಮೀರಿಸಿ ಎದ್ದು ನಿಂತಿವೆ. ಅಂತಹ ಶಾಲೆಗಳ ಪೈಕಿ ಮೈಸೂರಿನ ಎಚ್‌.ಡಿ ಕೋಟೆ ತಾಲ್ಲೂಕಿನ ಜಿ.ಜಿ(ಗೆಂಡೇಗೌಡರ) ಕಾಲೋನಿಯ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ನಿದರ್ಶನವಾಗಿದೆ.

ಈ ಶಾಲೆಗೆ ತೆರಳಿದವರು ದೂರದಿಂದಲೇ ಶಾಲಾ ಕಟ್ಟಡವನ್ನು ನೋಡಿ ಅಚ್ಚರಿ ಪಡುತ್ತಾರೆ. ಕಾರಣ ಶಾಲೆ ಅಷ್ಟು ಆಕರ್ಷಕವಾಗಿ ಕಂಗೊಳಿಸುತ್ತದೆ. ಶಾಲಾ ಕಾಂಪೌಂಡ್ ನಿಂದ ಆರಂಭವಾಗಿ ಶಾಲಾ ಹೊರಗೋಡೆ ಒಳಗಿನ ಕೊಠಡಿ ಹೀಗೆ ಎಲ್ಲವೂ ಸುಂದರ ಕಲಾತ್ಮಕ ಬಣ್ಣ ಮತ್ತು ಚಿತ್ರಗಳಿಂದ ಕಣ್ಮನಸೆಳೆಯುತ್ತದೆ.

ಕುಗ್ರಾಮದ ಸರ್ಕಾರಿ ಶಾಲೆ ಈ ಪರಿಯಲ್ಲಿ ಅಭಿವೃದ್ಧಿ ಆಗಿದ್ದು ಹೇಗೆ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಶಾಲೆಯ ಅಭಿವೃದ್ಧಿ ಹಿಂದೆ ಉಪ್ಕ್ರತಿ ಸೇವಾ ಸಂಸ್ಥೆ ಇರುವುದು ಗೋಚರಿಸುತ್ತದೆ. ಒಂದು ಕುಗ್ರಾಮದ ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟಕ್ಕೆ ಅಭಿವೃದ್ಧಿಯಾಗಿದ್ದು ಹೇಗೆ ಎಂದು ಹೇಳುವ ಮುನ್ನ ಉಪ್ಕ್ರತಿ ಸೇವಾ ಸಂಸ್ಥೆಯ ಬಗ್ಗೆ ಪರಿಚಯ ಮಾಡುವುದು ಅಗತ್ಯವಾಗಿದೆ.

ಉಪ್ಕ್ರತಿ ಸೇವಾ ಸಂಸ್ಥೆ ಎನ್ನುವುದು ಸ್ವಯಂ ಸೇವಕರನ್ನೊಳಗೊಂಡ ತಂಡವಾಗಿದೆ. ಆ ಮೂಲಕ ಈ ಸಂಸ್ಥೆ ತನ್ನದೇ ಆದ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಸ್ವಯಂ ಸೇವಕರು ಸೇರಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದೆ, ವಾರಾಂತ್ಯದ ಒಂದು ದಿನ ಒಂದಲ್ಲ ಒಂದು ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದು ಅವರ ಶ್ರಮದ ಫಲದಿಂದಲೇ ಜಿ.ಜಿ ಕಾಲೋನಿ ಗ್ರಾಮದ ಸರ್ಕಾರಿ ಶಾಲೆ ಮಿರಮಿರ ಮಿನುಗುತ್ತಿದೆ.

ಚಂದನ್ ನೇತೃತ್ವದ ಉಪ್ಕ್ರತಿಯ ಸ್ವಯಂ ಸೇವಕರ ತಂಡದಲ್ಲಿ ವೃತ್ತಿಪರ ಕಲಾವಿದರಾಗಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಆರ್‌ಜೆ, ಸಾಫ್ಟ್‌ವೇರ್ ಉದ್ಯೋಗಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಈ ಸಂಸ್ಥೆಯಲ್ಲಿದ್ದಾರೆ. ಅವರೆಲ್ಲರೂ ಸೇರಿ ವಾರಕ್ಕೊಮ್ಮೆ ತಮ್ಮ ಆಮೂಲ್ಯ ಸಮಯವನ್ನು ಸಾಮಾಜಿಕ ಚಟುವಟಿಕೆಗೆ ಮೀಸಲಿಟ್ಟು ಕೆಲಸ ಮಾಡುತ್ತಿರುವ ಪರಿಣಾಮವೇ ಶಾಲೆ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ.

ಈ ಸಂಸ್ಥೆ ಈಗಾಗಲೇ ಹಲವು ರೀತಿಯ ಕೆಲಸಗಳನ್ನು ಮಾಡಿದ್ದು ಅದರಲ್ಲಿ ಜಿ.ಜಿ ಕಾಲೋನಿ ಗ್ರಾಮದ ಸರ್ಕಾರಿ ಶಾಲೆಗೆ ಬಣ್ಣ ಬಳಿದು ಗೋಡೆಯ ಮೇಲೆ ಚಿತ್ರಕಲೆಗಳನ್ನು ರಚಿಸಿ ಮೆರಗು ನೀಡಿರುವುದು ಒಂದು ಸಾಧನೆಯಾಗಿದೆ. ಶಾಲಾ ಗೋಡೆಗಳ ಮೇಲೆ ವಾಟರ್ ಪ್ರೂಫ್ ಪೇಂಟಿಂಗ್, ನಲಿಕಲಿ ತರಗತಿಗೆ ಬಣ್ಣ ಹಚ್ಚಿ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಸಂದೇಶಗಳು ಮತ್ತು ಕಾರ್ಟೂನ್ ಚಿತ್ರಕಲೆಗಳನ್ನು ನಲಿಕಲಿ ತರಗತಿಯ ಕೊಠಡಿಗಳ ಗೋಡೆಗಳ ಮೇಲೆ ರಚಿಸಲಾಗಿದೆ. ಇದಕ್ಕೂ ಕಾರಣವಿದೆ. ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿರುವುದರಿಂದ, ಆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಸಂಬಂಧಿತ ಚಿತ್ರಕಲೆಗಳನ್ನು ಬಿಡಿಸುವ ಮೂಲಕ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಈ ಸಾಮಾಜಿಕ ಕಾರ್ಯದಲ್ಲಿ ಎನ್‌ಜಿಒ ಮುಖ್ಯಸ್ಥ ಚಂದನ್, ಸ್ವಯಂಸೇವಕರಾದ ಮಾನಸ, ದರ್ಶನ್, ವಿಕೇಶ್, ಪ್ರಕೃತಿ, ಕಿರಣ್, ಅಮೃತ, ಶಶಾಂಕ್, ವರ್ಷ, ಶರಣ್ಯ, ಅನು, ಪ್ರಾರ್ಥನಾ, ಪ್ರತೀಕ್ಷಾ , ಶಿವಂ, ಮಧುರಾ, ಹರಿಪ್ರಿಯಾ, ಅನನ್ಯಾ, ದೀಪ್ತಿ, ತಸ್ಮಿಯಾ, ಧನುಷಾ, ಸುಹಾಸ್, ಸಿದ್ದೇಶ್, ಸಯೀಮಾ, ಆಶಿಶ್ ಮೊದಲಾದವರು ತೊಡಗಿಸಿಕೊಂಡಿದ್ದಾರೆ.

ಮಾಹಿತಿಗೆ ಚಂದನ್, ಸ್ಥಾಪಕ, ಅಧ್ಯಕ್ಷ, ಉಪ್ಕ್ರತಿ ಮೊ: 9742662664ನ್ನು ಸಂಪರ್ಕಿಸಬಹುದಾಗಿದೆ.


Spread the love