
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ 2000 – ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆ ಘೋಷಣೆ
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರಿಗೆ ಬೇಷರತ್ತಾಗಿ 2,000 ರೂ. ನೀಡಲಾಗುವುದು. ಇದಕ್ಕಾಗಿ ಗೃಹಲಕ್ಷ್ಮೀ ಯೋಜನೆ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದರು.
ಬೆಂಗಳೂರಿನ ಅರಮನೆ ಮೈದಾನದ ಮುಖ್ಯದ್ವಾರ ಬಳಿ ಕಾಂಗ್ರೆಸ್ ಆಯೋಜಿಸಿರುವ ‘ನಾ ನಾಯಕಿ’ ಸಮಾವೇಶದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಮ್ಮುಖದಲ್ಲಿ ಅವರು ಈ ಘೋಷಣೆ ಮಾಡಿದರು. ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆಯೂ ಅವರು ಭರವಸೆ ನೀಡಿದರು. ಇದಕ್ಕೆ ಪ್ರಿಯಾಂಕಾ ಗಾಂಧಿ ದನಿಗೂಡಿಸಿದರು.
ಬೆಲೆ ಏರಿಕೆಯ ಸಂಕಷ್ಟದಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೀಗಾಗಿ ಇಡೀ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗಾಗಿ ಈ ಕೊಡುಗೆ ನೀಡುತ್ತಿದ್ದೇವೆ. ಯೋಜನೆಯ ಭರವಸೆಯೊಂದಿಗೆ ಗ್ಯಾರಂಟೀ ಚೆಕ್ ಅನ್ನು ಈಗಲೇ ನೀಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿದರು. ದೇಶಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೊಡುಗೆ ಸಾಕಷ್ಟಿದೆ. ಅವರು ಬಡವರು, ಮಹಿಳೆಯರು, ರೈತರಿಗೆ ಸಾಕಷ್ಟು ಯೋಜನೆಗಳು ನೀಡಿದ್ದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಲಾಗಿತ್ತು. ಆದರೆ, ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜನಸಾಮಾನ್ಯರ ಹಿತ ಕಡೆಗಣಿಸಿದೆ ಎಂದು ಪ್ರಿಯಾಂಕಾ ಹೇಳಿದರು.
‘ಬೆಲೆ ಏರಿಕೆಯಿಂದ ಇಂದು ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕರ್ನಾಟಕ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಪಿಎಸ್ಐ ನೇಮಕಾತಿ ಹಗರಣ ಸೇರಿ ಹಲವು ಭ್ರಷ್ಟಾಚಾರ ಆರೋಪಗಳಿವೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಕೊವಿಡ್ ವೇಳೆ ಜನರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಉದ್ಯೋಗ ನೀಡುವಲ್ಲಿ ವಿಫಲವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ಬಡವರ ಸಮಸ್ಯೆಗಳಿಗೆ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಶ್ರೀಮಂತರ ಪರ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.