ಕುಡಿಯುವ ನೀರಿನ ಯೋಜನೆಗಳ ಸದ್ವಿನಿಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೂಚನೆ 

Spread the love

ಕುಡಿಯುವ ನೀರಿನ ಯೋಜನೆಗಳ ಸದ್ವಿನಿಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೂಚನೆ 

ಮಂಗಳೂರು: ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಗೆ 250 ಕೋಟಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಅದರ ಸದ್ವಿನಿಯೋಗವಾಗಬೇಕು, ಯೋಜನೆಯಡಿ 53,180 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿದ್ದು, ಆ ಮನೆಗಳಿಗೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ತಾಲೂಕು ಪಂಚಾಯತ್‍ಗಳ ಕಾರ್ಯನಿರ್ವಹಣಾಧಿಕಾರಿಗಳು ಖಾತರಿ ಪಡಿಸಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಸೂಚಿಸಿದರು.

ಅವರು ಫೆ.11ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಯೋಜನೆಯಡಿ 302 ಒವರ್ ಹೆಡ್ ಟ್ಯಾಂಕರ್‍ಗಳ ಮೂಲಕ ಮನೆಮನೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಬಗ್ಗೆ ತಾಲೂಕು ಪಂಚಾಯತ್‍ಗಳ ಇಒಗಳು ಖಚಿತ ಪಡಿಸಿಕೊಳ್ಳಬೇಕು, ಕುಡಿಯುವ ನೀರು ಫಲಾನುಭವಿಗಳ ಮನೆ ತಲುಪಬೇಕು ಆ ಮೂಲಕ ಯೋಜನೆಯ ಸಾಕಾರವಾಗಬೇಕು ಎಂದು ಜಲ ಜೀವನ್ ಮಿಷನ್ ಯೋಜನಾಧಿಕಾರಿ ನರೇಂದ್ರ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂದರ್ಭದಲ್ಲಿ ಡೀಮ್ಡ್ ಅರಣ್ಯ ಪ್ರದೇಶಗಳಲ್ಲಿಯೂ ಪೈಪ್‍ಲೈನ್ ಅಥವಾ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಸ್ಥಳಾವಕಾಶ ನೀಡಬೇಕು, ಕುಡಿವ ನೀರಿನ ಸರಬರಾಜಿಗೆ ಯಾವುದೇ ಸಮಸ್ಯೆಯಾಗದಂತೆ ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಬಹುಗ್ರಾಮ ಯೋಜನೆಯಡಿ 70 ಗ್ರಾಮ ಪಂಚಾಯತಿಗಳ 112 ಗ್ರಾಮಗಳಿಗೆ 505 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ಪೂರೈಕೆಯ ಯೋಜನೆಯ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಪೂರ್ಣಗೊಳಿಸಬೇಕು ಹಾಗೂ ಜಲಜೀವನ್ ಮತ್ತು ಬಹುಗ್ರಾಮ ಯೋಜನೆಗಳು ಒಂದಕ್ಕೊಂದು ಹೊಂದಿಕೆಯಾಗದಂತೆ ಎಚ್ಚರ ವಹಿಸುವಂತೆ ಸಚಿವರು ಸೂಚಿಸಿದರು.

ಅದೇ ರೀತಿ ಸ್ವಚ್ಛ ಭಾರತ್ ಮಿಷನ್‍ನಡಿ ವೈಯಕ್ತಿಕ ಗೃಹ ಶೌಚಾಲಯಗಳು, ಸಾರ್ವಜನಿಕ ಶೌಚಾಲಯಗಳು, ದ್ರವ ತ್ಯಾಜ್ಯ ನಿರ್ವಹಣೆಯ ಬಾಕಿ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಬೇಕು, ಸಾರ್ವಜನರ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸುವುದು ಹಾಗೂ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಈ ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ರಸ್ತೆಗಳು, ಹೆದ್ದಾರಿಗಳ ಅಕ್ಕಪಕ್ಕಗಳಲ್ಲಿ ಘನತ್ಯಾಜ್ಯ ಎಸೆಯುವವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ, ಅಂತಹ 58 ಪ್ರಕರಣಗಳಲ್ಲಿ 1.10 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ, ಸಾರ್ವಜನಿಕರು ರಸ್ತೆ ಬದಿಯಲ್ಲಿ ಕಸ ಎಸೆದಂತೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅಲ್ಲದೆ ಗ್ರಾಮಮಟ್ಟದಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಲು ಟಾಸ್ಕ್‍ಫೋರ್ಸ್ ಸಮಿತಿಯನ್ನು ಸಹ ರಚಿಸಲಾಗಿದೆ ಎಂದರು.

ಅದರಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಎಂಆರ್‍ಎಫ್ ಘಟಕಗಳನ್ನು ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ತೆಂಕ, ಎಡಪದವಿನಲ್ಲಿ ನಿರ್ಮಾಣವಾಗುತ್ತಿವೆ, ಬಂಟ್ವಾಳ ತಾಲೂಕಿನ ಗೋಲ್ತಮಜಲು ಹಾಗೂ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಮಲತ್ಯಾಜ್ಯ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಚಿವರು ತಾಕೀತು ಮಾಡಿದರು.

ಮಹಾತ್ಮ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಸೃಜನೆ ಮತ್ತಷ್ಟು ಹೆಚ್ಚಿಸುವಂತೆ ತಿಳಿಸಿದ ಸಚಿವರು, ನರೇಗಾದಡಿ ಹೆಚ್ಚು ಮಂದಿ ಕೂಲಿಕಾರರಿಗೆ ಉದ್ಯೋಗ ಒದಗಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ, ಈ ಬಾರಿ ಶೇಕಡ 110ರಷ್ಟು ಮಾನವ ದಿನಗಳನ್ನು ಸೃಜಿಸಿದ್ದು, ಮುಂದಿನ ಸಾಲಿನಲ್ಲಿ ಮತ್ತಷ್ಟು ಉದ್ಯೋಗ ಸೃಜನೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಜಿಲ್ಲೆಯ 223 ಗ್ರಾಮ ಪಂಚಾಯತ್ ಗಳ ಪೈಕಿ 27 ಪಂಚಾಯತ್‍ಗಳನ್ನು ಆಯ್ಕೆ ಮಾಡಲಾಗಿದೆ, ಆ ಗ್ರಾಮಗಳಲ್ಲಿ ಬೀದಿ ದೀಪ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಡಿಜಿಟಲ್ ಲೈಬ್ರರಿ ಸೇರಿದಂತೆ ನಿಗದಿಪಡಿಸಲಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗಿದೆ, ಅಮೃತ ಆರೋಗ್ಯ ಯೋಜನೆಯಡಿ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳ 25 ಕಾಮಗಾರಿಗಳಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಆರೋಗ್ಯ ಕೇಂದ್ರಗಳ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ, ಅಮೃತ ಗ್ರಾಮೀಣ ವಸತಿ ಯೋಜನೆಯಡಿ 1767 ವಸತಿ ರಹಿತ ಹಾಗೂ 2,037 ನಿವೇಶನ ರಹಿತರಿಗಾಗಿ 128 ಎಕರೆ ಜಮೀನನ್ನು 27 ಗ್ರಾಮ ಪಂಚಾಯಿತಿಗಳಲ್ಲಿ ಕಾಯ್ದಿರಿಸಲಾಗಿದೆ ಎಂದು ಜಿ.ಪಂ. ಸಿಇಒ ಡಾ. ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಅಮೃತ ಅಂಗನವಾಡಿ ಯೋಜನೆಯಡಿ ಶೌಚಾಲಯ, ವಿದ್ಯುಚ್ಛಕ್ತಿ, ಫ್ಯಾನ್, ಗೋಡೆ ನಿರ್ಮಾಣ, ಪೇಂಟಿಂಗ್, ಅಡುಗೆ ಕೋಣೆ, ಉಗ್ರಾಣಗಳನ್ನು ನಿರ್ಮಿಸಿ ಕೊಡಲು ಒಟ್ಟು 25 ಅಂಗನವಾಡಿ ಕೇಂದ್ರಗಳಿಗೆ 25 ಲಕ್ಷ ರೂಗಳ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ, ಅಮೃತ ಶಾಲೆ ಯೋಜನೆಯಡಿ ಜಿಲ್ಲೆಯ 9 ತಾಲೂಕುಗಳ 27 ಶಾಲೆಗಳಿಗೆ 2.70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದವರು ಅಂದಾಜು ಸಿಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಿದರು.

ಸಾಧ್ಯವಾದಷ್ಟು ಬೇಗ ಪಟ್ಟಿ ಸಿದ್ದಪಡಿಸುವಂತೆ ತಿಳಿಸಿದ ಸಚಿವರು, ಬಸವ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾ, ಪ್ರಧಾನಮಂತ್ರಿ ಅವಾಸ್, ದೇವರಾಜ್ ಅರಸು ವಸತಿ ಹಾಗೂ ವಿಶೇಷ ವಸತಿ ಯೋಜನೆಯಡಿ 4,750 ಮನೆಗಳು ಇನ್ನೂ ಪೂರ್ಣಗೊಳ್ಳದ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಆದ್ಯತೆಯ ಮೇರೆಗೆ ಕ್ರಮವಹಿಸುವಂತೆ ಸೂಚಿಸಿದರು.

ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸಾಮಾಜಿಕ ಭದ್ರತಾ ಯೋಜನೆಗಳ ಬಾಕಿ ಉಳಿದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಇದೇ ಫೆಬ್ರವರಿ 19 ರಿಂದ 28 ರವರೆಗೆ ಜಿಲ್ಲೆಯಾದ್ಯಂತ ಕಡತ ವಿಲೇವಾರಿ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಗ್ರಾಮಪಂಚಾಯತ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ಬಾಕಿ ಉಳಿದಿರುವ ಕಡತಗಳ ವಿಲೇವಾರಿಗೆ ಅಗತ್ಯ ಕ್ರಮವಹಿಸಲಾಗುತ್ತಿದೆ, ಫೆಬ್ರವರಿ 28ರೊಳಗೆ ಕಡತ ವಿಲೇವಾರಿಯನ್ನು ಪೂರ್ಣಗೊಳಿಸಿ ಕಂದಾಯ ಮೇಳಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದರು.

94ಸಿ ನಡಿ ಅರ್ಜಿ ಸಲ್ಲಿಸಿದ 53,749 ಅರ್ಜಿದಾರರ ಅರ್ಜಿಗಳು ತಿರಸ್ಕøತವಾಗಿರುವುದನ್ನು ಮತ್ತೋಮ್ಮೆ ಪರಿಶೀಲಿಸುವಂತೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ನಿರ್ದೇಶನ ನೀಡಿದ ಸಚಿವರು, ಈ ಅರ್ಜಿಗಳನ್ನು ಒಮ್ಮೆ ತಿರಸ್ಕರಿಸಿದರೆ, ಅರ್ಹರು ಮತ್ತೊಮ್ಮೆ ಸಲ್ಲಿಸಲು ಆಗದು, ಆದ ಕಾರಣ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ತಿಳಿಸಿದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 16,345 ವಿದ್ಯಾರ್ಥಿಗಳು ಮಾತ್ರ ಫಲಾನುಭವಿಗಳು ಎಂಬ ಮಾಹಿತಿ ಒದಗಿಸಲಾಗಿದೆ, ಆದರೆ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ರೈತರಿದ್ದು, ಆ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಆ ನಿಟ್ಟಿನಲ್ಲಿ ಕೃಷಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ರೈತ ಮಕ್ಕಳ ಸಂಖ್ಯೆಯನ್ನು ನಿಖರವಾಗಿ ಪತ್ತೆ ಮಾಡುವಂತೆ ಸೂಚನೆ ನೀಡಿದರು.

ಈ ತಿಂಗಳ ಅಂತ್ಯದೊಳಗೆ ಬಾಕಿ ಉಳಿದ ಬಿಪಿಎಲ್ ಕಾರ್ಡ್‍ಗಳ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, 3,492 ಬಾಕಿ ಉಳಿದ ಅರ್ಜಿಗಳನ್ನು ವಿಲೇ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್‍ಗೆ ಸಚಿವರು ತಿಳಿಸಿದರು.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಫಲಿತಾಂಶ ದಾಖಲಿಸಬೇಕು, ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ ಜಿಲ್ಲೆಯಲ್ಲಿ 29,704 ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಖಾಲಿ ಇರುವ 25 ಅಂಗನವಾಡಿ ಕಾರ್ಯಕರ್ತೆ ಹಾಗೂ 57 ಸಹಾಯಕಿಯರ ಹುದ್ದೆಗಳನ್ನು ಅತಿಶೀಘ್ರವಾಗಿ ಭರ್ತಿ ಮಾಡಿಕೊಳ್ಳುವಂತೆ ತಿಳಿಸಿದ ಸಚಿವರು ಸಾಧಾರಣ ಕಡಿಮೆ ತೂಕ ಹಾಗೂ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ಸಂಖ್ಯೆಯಲ್ಲಿ ತಮಗೆ ಅಸಮಾಧಾನವಿದೆ, ನಿಖರ ಸಂಖ್ಯೆ ಪತ್ತೆಹಚ್ಚಲು ಒಂದು ಅಧ್ಯಯನ ಮಾಡಬೇಕು ಹಾಗೂ ಸಾಧಾರಣ ಕಡಿಮೆ-ತೂಕ ಹಾಗೂ ತೀವ್ರ ಅಪೌಷ್ಠಿಕ ಮಕ್ಕಳ ಪತ್ತೆಗೆ ಕೇವಲ ತೂಕ ಹಾಗೂ ಅಳತೆಯ ಮಾನದಂಡಕ್ಕೆ ಮಾತ್ರ ಸೀಮಿತವಾಗಬಾರದು, ಹೊಸ ಐಡಿಯಾಗಳನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್‍ಗಳು ಹಾಗೂ ಇತರೆ ಅಗತ್ಯ ಸೌಲಭ್ಯಗಳ ಬಗ್ಗೆ ಅಗತ್ಯವಿದ್ದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರಬೇಕು, ಆ ಇಲಾಖೆಯ ಸಚಿವರು ಇಲ್ಲಿಯವರೇ ಆಗಿರುವುದರಿಂದ ಅಗತ್ಯ ಯೋಜನೆಗಳು ಹಾಗೂ ಅವಶ್ಯಕತೆಗಳನ್ನು ಕೂಡಲೇ ಅನುμÁ್ಠನಗೊಳಿಸಲಾಗುವುದು ಎಂದ ಸಚಿವರು, ಕೊರಗ ಹಾಗೂ ಮಲೆಕುಡಿಯರ ದತ್ತಾಂಶ ಸಂಗ್ರಹಿಸಿಬೇಕು, ಆ ಜನಾಂಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಒದಗಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು, ಶಾಲೆ ಹಾಗೂ ಕಾಲೇಜುಗಳನ್ನು ಬಿಟ್ಟ ಆ ಜನಾಂಗದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಮರಳಿ ದಾಖಲಿಸಲು ಅಗತ್ಯ ಕ್ರಮ ವಹಿಸಲಾಗುವುದು ಅದಕ್ಕಾಗಿ ಅವರ ದತ್ತಾಂಶವನ್ನು ಸಂಗ್ರಹಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ರಾಮಕುಂಜದಲ್ಲಿ ಈಗಾಗಲೇ ಗೋಶಾಲೆಗೆ ಸ್ಥಳ ನಿಗದಿಯಾಗಿದೆ, ಜಿಲ್ಲೆಯ ತಾಲೂಕುಗಳಲ್ಲಿ ಒಂದರಂತೆ ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳ ಸಹಭಾಗಿತ್ವದಲ್ಲಿ ಗೋಶಾಲೆಗಳನ್ನು ನಿರ್ಮಿಸಿ, ನಿರ್ವಹಿಸಲು ಕ್ರಮವಹಿಸಲಾಗುವುದು, ಸುಬ್ರಹ್ಮಣ್ಯ, ಪುತ್ತೂರಿನ ಮಹಾಲಿಂಗೇಶ್ವ ದೇವಸ್ಥಾನ, ಕಟೀಲು, ಪೆÇಳಲಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ, ಅಲ್ಲಿ ಸ್ಥಳ ಗುರುತಿಸಿ, ಗೋಶಾಲೆಗಳ ಆರಂಭಕ್ಕೆ ಯತ್ನಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು, ಹಾಗಾದಾಗ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದಾಗಿದೆ, ಕೆಡಿಪಿ ಸಭೆ ಬರುವ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು, ಸಂಬಂಧಿಸಿದ ಇಲಾಖೆಗಳ ಮಾಹಿತಿ ಅಧಿಕಾರಿಗಳ ಬೆರಳ ತುದಿಯಲ್ಲಿರಬೇಕು, ನಿಖರ ಮಾಹಿತಿಯಿಲ್ಲದೇ ಆಗಮಿಸುವ ಅಧಿಕಾರಿಗಳನ್ನು ಸಹಿಸಲು ಸಾಧ್ಯವಿಲ್ಲ, ಕೆಡಿಪಿ ಎನ್ನುವುದು ಸಾಮಾನ್ಯ ಸಭೆಯಲ್ಲ, ಎಲ್ಲಾ ಜನಪ್ರತಿನಿಧಿಗಳು ಹಾಜರಾಗುವ ಮಹತ್ವದ ಸಭೆ, ಇಲ್ಲಿ ಅವರು ಬಯಸುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳು ನೀಡಬೇಕು, ಕಾಟಾಚಾರಕ್ಕೆ ಉತ್ತರ ನೀಡುವಂಥ ಕ್ರಮಗಳನ್ನು ಸಹಿಸುವುದಿಲ್ಲ ಎಂದ ಸಚಿವರು, ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಚಟುವಟಿಕೆಗಳು ಕಂಡುಬರುತ್ತವೆ, ವಿಧಾನ ಸಭೆಯ ಅಧಿವೇಶನದ ನಂತರ ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸುವುದಾಗಿ ತಿಳಿಸಿದ ಸಚಿವರು ಮುಂದಿನ ಹದಿನೈದು ದಿನದ ನಂತರ ಈ ಸಭೆಯಲ್ಲಿ ಚರ್ಚಿಸಿದ ಅಂಶಗಳಿಗೆ ಉತ್ತರ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು, ನೀಡಲಾದ ಗುರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು, ಮುಖ್ಯವಾಗಿ ಜನಪ್ರತಿನಿಧಿಗಳಿಗೆ ಜನಪ್ರತಿನಿಧಿಗಳು ತಿಳಿಸಿದ ಕೆಲಸವನ್ನು ಪೂರ್ಣಗೊಳಿಸಬೇಕು, ಸಭೆಗಳಲ್ಲಿ ಅನುಪಾಲನಾ ವರದಿ ತಿಳಿಸುವ ಸ್ಥಿತಿ ಉದ್ಭವಿಸದಂತೆ ಆ ಕೆಲಸಗಳನ್ನು ಅಥವಾ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಮುಖ್ಯ ಎಂದ ಸಚಿವರು ಇದೇ ತಿಂಗಳ 19ರಿಂದ ಜಿಲ್ಲೆಯಲ್ಲಿ ಕಡತ ವಿಲೇವಾರಿ ಅಭಿಯಾನ ಆರಂಭಿಸಲಾಗುವುದು, ಯಾವುದೇ ಇಲಾಖೆಯಲ್ಲಿ ಕಡತಗಳು ಬಾಕಿ ಉಳಿಯಬಾರದು, ಫೆಬ್ರವರಿ 28ರೊಳಗೆ ಎಲ್ಲಾ ಕಡತಗಳು ವಿಲೇವಾರಿಯಾಗಬೇಕು, ತದನಂತರ ಕಂದಾಯ ಮೇಳ ಹಮ್ಮಿಕೊಳ್ಳಬೇಕು, ಜಿಲ್ಲೆಯ ಎಲ್ಲಾ ತಾಲೂಕುಗಳ ಜನರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು, ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.

ಸಂಸದರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ವೇದಿಕೆಯಲ್ಲಿದ್ದರು.

ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಉಮನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಪ್ರತಾಪ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಬಿ.ಎಂ. ಫಾರೂಕ್, ಕಿಯೋನಿಸ್ಕ್ ಹರಿಕೃಷ್ಣ ಬಂಟ್ವಾಳ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಸಭೆಯಲ್ಲಿದ್ದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love