ಕುತೂಹಲ ಕೆರಳಿಸಿದ ಡಿಕೆಶಿ-ಎಚ್.ವಿಶ್ವನಾಥ್ ಭೇಟಿ!

Spread the love

ಕುತೂಹಲ ಕೆರಳಿಸಿದ ಡಿಕೆಶಿ-ಎಚ್.ವಿಶ್ವನಾಥ್ ಭೇಟಿ!

ಮೈಸೂರು: ಪ್ರಜಾಧ್ವನಿ ಯಾತ್ರೆಯ ನಿಮಿತ್ತ ಕೆ.ಆರ್.ನಗರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಟ್ಟಣದ ವಿನಾಯಕ ಬಡಾವಣೆಯಲ್ಲಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಈ ಹಿಂದೆ ಕಾಂಗ್ರೆಸ್ ನಲ್ಲಿದ್ದು, ಕಳೆದ ಚುನಾವಣೆ ವೇಳೆ ಜೆಡಿಎಸ್ ಸೇರಿ ಹುಣಸೂರು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಎಚ್.ವಿಶ್ವನಾಥ್ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸೋಲು ಕಂಡು ಆ ನಂತರ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿದ್ದು, ಇದೀಗ ಬಿಜೆಪಿಯಿಂದ ಸಂಬಂಧ ಕಡಿದುಕೊಂಡು ಕಾಂಗ್ರೆಸ್ ಸೇರುವ ಆಕಾಂಕ್ಷೆ ವ್ಯಕ್ತಪಡಿಸುತ್ತಿರುವ ವಿಶ್ವನಾಥ್ ಅವರೊಂದಿಗೆ ಭೇಟಿ ಮಾಡಿ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿರುವುದು ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಭೇಟಿಯ ಕುರಿತಂತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಚ್.ವಿಶ್ವನಾಥ್ ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದು ಕಾರಣಾಂತರದಿಂದ ಜೆಡಿಎಸ್ ಮತ್ತು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿರುವುದರಿಂದ ಪಕ್ಷದ ವತಿಯಿಂದ ಅವರಿಗೆ ಶೀಘ್ರದಲ್ಲೇ ಆಹ್ವಾನ ನೀಡಲಾಗುತ್ತದೆ ಎಂದರಲ್ಲದೆ ಇದು ಸೌಹಾರ್ಧ ಭೇಟಿ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಹೇಳಿಕೆ ಪ್ರಕಾರ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಗೆ ಶೀಘ್ರವೇ ಸೇರ್ಪಡೆಯಾಗುವ ಸಾಧ್ಯತೆ ಕಂಡು ಬಂದಿದೆ. ಇದುವರೆಗೂ ಬಿಜೆಪಿಗೆ ರಾಜೀನಾಮೆ ಸಲ್ಲಿಸದೆ ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ವಿಶ್ವನಾಥ್ ಅವರ ಕುರಿತಂತೆ ಬಿಜೆಪಿ ಮೌನತಾಳಿದೆ.

ಎಚ್.ವಿಶ್ವನಾಥ್ ಅವರು ಯಾವಾಗ ಕಾಂಗ್ರೆಸ್ ನ್ನು ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಸಂಸದರಾಗಿ ಕೇಂದ್ರ ರಾಜಕೀಯದಲ್ಲಿದ್ದ ಅವರು ಪ್ರತಾಪ್ ಸಿಂಹ ಅವರ ಎದುರು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ ರಾಜ್ಯರಾಜಕೀಯಕ್ಕೆ ಮರಳಿದ್ದರು. ಮುಂದೆ ಕಾಂಗ್ರೆಸ್ ಸೇರ್ಪಡೆ ಬಳಿಕ ಅವರ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.


Spread the love