ಕುತೂಹಲ ಕೆರಳಿಸಿದ ಹೆಚ್ಡಿಕೆ-ಇಬ್ರಾಹಿಂ ಮಾತುಕತೆ

Spread the love

ಕುತೂಹಲ ಕೆರಳಿಸಿದ ಹೆಚ್ಡಿಕೆ-ಇಬ್ರಾಹಿಂ ಮಾತುಕತೆ

ರಾಮನಗರ: ಒಂದೆಡೆ ಜೆಡಿಎಸ್‌ನ ಒಂದಷ್ಟು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದಂತೆಯೇ ಮತ್ತೊಂದೆಡೆ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಬೆಳವಣಿಗೆ ನಡೆದಿದೆ.

ಬಿಡದಿಯ ಕೇತಗಾನಹಳ್ಳಿ ಬಳಿಯಿರುವ ಕುಮಾರಸ್ವಾಮಿ ಅವರ ತೋಟದ ಮನೆಗೆ ರಾಮನಗರದ ಕೆಲವು ಅಲ್ಪಸಂಖ್ಯಾತ ಜೆಡಿಎಸ್ ಮುಖಂಡರೊಂದಿಗೆ ಆಗಮಿಸಿದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು, ಮಾತುಕತೆ ನಡೆಸುವುದರೊಂದಿಗೆ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆಯಲ್ಲದೆ, ಇಬ್ಬರು ಮುಖಂಡರ ಭೇಟಿ ಮತ್ತು ಮಾತುಕತೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಮೈಸೂರು, ಮಂಡ್ಯ, ಕೋಲಾರ ಹಾಗೂ ತುಮಕೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಜೆಡಿಎಸ್ ಶಾಸಕರು ಹಾಗೂ ಜಿಲ್ಲಾಧ್ಯಕ್ಷರು, ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಹೇಳುತ್ತಿರುವ ಸನ್ನಿವೇಶದಲ್ಲಿ ಕಾಂಗ್ರೆಸ್ ವಲಯದಲ್ಲಿ ಅದರಲ್ಲಿಯೂ ಪ್ರತಿಪಕ್ಷದ ನಾಯಕರೂ ಆದ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತವಲಯದ ಗುರುತಿಸಿಕೊಂಡಿರುವ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್ ಮುಖಂಡರಾದ ಸಿ.ಎಂ.ಇಬ್ರಾಹಿಂ ಅವರು ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿ ಸುದ್ದಿಯಾಗಿದ್ದರು. ನಂತರದಲ್ಲಿ ಮೌನವಹಿಸಿದ್ದ ಇಬ್ರಾಹಿಂ ಅವರು ಈಗ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿಗಳ ಕುರಿತು ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿದೆ.

ಈ ಕುರಿತಂತೆ ಮಾತನಾಡಿರುವ ಸಿ.ಎಂ.ಇಬ್ರಾಹಿಂ ಅವರು ಇದೊಂದು ಸೌಹಾರ್ಧಯುತ ಭೇಟಿಯಾಗಿದ್ದು, ಕುಮಾರಸ್ವಾಮಿ ಅವರ ಕ್ಷೇಮ ವಿಚಾರಿಸಲು ಬಂದಿದ್ದಾಗಿ ಹೇಳಿದ್ದಾರೆ. ಆದರೆ ಅದು ಅಷ್ಟಕ್ಕೆ ಸೀಮಿತವಾದ ಭೇಟಿ ಎನ್ನುವುದನ್ನು ಒಪ್ಪಿಕೊಳ್ಳುವುದು ತುಸು ಕಷ್ಟವೇ…


Spread the love