ಕುಲಶಾಸ್ತ್ರ ಅಧ್ಯಯನಕ್ಕೆ ಎನ್.ಯು.ನಾಚಪ್ಪ ಆಕ್ಷೇಪ

Spread the love

ಕುಲಶಾಸ್ತ್ರ ಅಧ್ಯಯನಕ್ಕೆ ಎನ್.ಯು.ನಾಚಪ್ಪ ಆಕ್ಷೇಪ

ಮೈಸೂರು: ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಕುಲಶಾಸ್ತ್ರ ಅಧ್ಯಯನದ ನೆಪದಲ್ಲಿ ಸಮಾವೇಶ ನಡೆಸಿ, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳ ದಾರಿತಪ್ಪಿಸಲಾಗಿದೆ. ಕೊಡವರ ಹೆಸರಿನಲ್ಲಿ ಇತರೆ ಪಂಗಡದವರ ಅಧ್ಯಯನಕ್ಕೆ ತೊಡಗಿರುವುದು ಆಕ್ಷೇಪಾರ್ಹ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ದೂರು ಸಲ್ಲಿಸಲಿದ್ದೇವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಡವರಲ್ಲಿ ಉಪಭಾಷಿಕರಿಲ್ಲ. ನಮಗೆ ಸ್ವಾಯತ್ತತೆ ಬೇಕು ಎಂದು ಹೋರಾಟಗಳನ್ನು ನಡೆಸುತ್ತಿರುವ ವೇಳೆ ಸರ್ಕಾರ ಮೂಲ ಕೊಡವರನ್ನು ಅವಮಾನಿಸುವ ಕಾರ್ಯ ಮಾಡಿ ಸಾಂಸ್ಕೃತಿಕ ಅಪಚಾರ ಮಾಡಿದ್ದಾರೆ. ವಿರಾಜ ಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸರ್ಕಾರದ ದಿಕ್ಕು ತಪ್ಪಿಸಿ ನಮ್ಮ ಇತಿಹಾಸವನ್ನು ಬುಡಮೇಲು ಮಾಡುತ್ತಿದ್ದಾರೆ. ಮಲಬಾರ್ ಪ್ರದೇಶದವರನ್ನು ಕೊಡವರೆಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ದೂರಿದರು.

ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ಇತ್ತು. ಈಚೆಗೆ ಶಾಸಕರ ಮೂಲಕವೇ ಭೇಟಿಯಾಗಬೇಕು ಎನ್ನುತ್ತಿದ್ದಾರೆ. ಶಾಸಕರನ್ನು ಗೆಲ್ಲಿಸಿದ್ದೇವೆ ಅಂದ ಮಾತ್ರಕ್ಕೆ ಕೊಡವರ ಪೇಟೆಂಟ್ ಅವರಿಗೆ ನೀಡಿಲ್ಲ. ಮೂಲ ಕೊಡವರ ಹಕ್ಕಿಗಾಗಿ ಹೋರಾಟ ನಡೆಯುತ್ತಿರುತ್ತದೆ. ಸರ್ಕಾರಿ ಮಟ್ಟದ ಈ ಲೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಂಸದ ಪ್ರತಾಪ ಸಿಂಹ ಕೊಡಗಿಗೆ ಯಾವ ಕೊಡುಗೆ ನೀಡದೆ ನಮ್ಮನ್ನು ಓಟ್ ಬ್ಯಾಂಕ್‌ಗಳಾಗಿ ಮಾಡುತ್ತಿದ್ದಾರೆ. ಕೊಡವರನ್ನು ಬುಡಕಟ್ಟು ಜನಾಂಗದವರಲ್ಲವೆಂದು ಹೇಳಿದ ನಿದರ್ಶನಗಳಿವೆ. ಮೀಸಲಾತಿ, ಸ್ವಾಯತ್ತತೆಗಾಗಿ ಹೋರಾಡುತ್ತಿರುವ ನಮಗೆ ಸಹಾಯ ಮಾಡದೆ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.

ಕಲಿಯಂಡ ಪ್ರಕಾಶ್, ಬೇರ್ಪಡಿಯಂಡ ಬಿದ್ದಪ್ಪ, ಚಂಪಂಡ ಜನತ್, ಅರಿಯಂಡ ಗಿರೀಶ್, ಅಪ್ಪಾರಂಡ ಪ್ರಕಾಶ್ ಇದ್ದರು.


Spread the love

Leave a Reply

Please enter your comment!
Please enter your name here