ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ; ಸಮಾಲೋಚನೆ ಸಭೆ

Spread the love

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ; ಸಮಾಲೋಚನೆ ಸಭೆ

ಮುಂಬಯಿ : ಶ್ರೀ ವೀರನಾರಾಯಣ ದೇವಸ್ಥಾನವು ಮುಂದಿನ ಪೀಳಿಗೆಯ ಧಾರ್ಮಿಕ ಚಿಂತನೆ ಹಾಗೂ ಉತ್ತಮ ಭವಿಷ್ಯಕ್ಕೆ ನಿರ್ಮಾಣಗೊಳ್ಳುತ್ತಿರುವ ಕುಲಾಲ ಸಮುದಾಯದ ಸ್ವಾಭಿಮಾನದ ದೇವಸ್ಥಾನ. ಕುಲಾಲ ಸಮುದಾಯವು ಎರಡನೇ ಇತಿಹಾಸವನ್ನು ನಿರ್ಮಿಸಿದಂತಿದೆ. . ಮುಂಬಯಿಯ ಸಮಿತಿ ನಿರ್ಮಾಣಗೊಳ್ಳುದರ ಮೂಲಕ ನಾವು ಇನ್ನೂ ಬಲಿಷ್ಠರಾಗಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ನುಡಿದರು.

ಮೇ. 29 ರಂದು ಸಂಜೆ ಮುಂಬಯಿ ಸಂತಾಕ್ರೂಸ್ ಪೂರ್ವದ ಪೇಜಾವರ ಮಠದಲ್ಲಿ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಮಂಗಳೂರು ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂಬೈ ಸಮಿತಿ ರಚಿಸುವ ಸಮಾಲೋಚನೆ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಯೂರ್ ಉಳ್ಳಾಲ್ ಅವರು ಕುಲಾಲ ಸಮಾಜದ ಕುಲದೇವರಾದ ಕುಲಶೇಕರದ ವೀರನಾರಾಯಣ ದೇವಸ್ಥಾನವು ಕುಲಾಲ ಸಮುದಾಯದ ಶಕ್ತಿ ಕೇಂದ್ರವಾಗಿದೆ. ಮುಂಬಯಿಗರು ಮಹಾನಗರದ ಮಹಾ ಜನರು ಹಾಗೂ ಸಾಹಸಿಗರು. ದೇವಸ್ಥಾನದಲ್ಲಿ ಕೇವಲ ಪೂಜೆ ಮಾತ್ರವಲ್ಲ ಸಾಮಾಜಿಕ ಬದಲಾವಣೆ ಹಾಗೂ ಸಮಸ್ಯೆ ಪರಿಹಾರವಾಗುತ್ತದೆ. ಜನರನ್ನು ಒಗ್ಗೂಡಿಸುವ ಶಕ್ತಿ ದೇವಸ್ಥಾನಕ್ಕಿದೆ. ಯುವ ಜನಾಂಗಕ್ಕೆ ವೈವಾಹಿಕ ಜೀವನಕ್ಕೆ ತಾನು ಬಯಸಿದಕ್ಕಿಂತಲೂ ಉನ್ನತ ಮಟ್ಟದ ಜೋಡಿ ನಮ್ಮ ಸಮಾಜದಲ್ಲಿಯೇ ಇದೆ. ಆದರೆ ಅವರೆಲ್ಲರನ್ನೂ ಒಟ್ಟು ಸೇರಿಸಿ ಒಬ್ಬರನ್ನೊಬ್ಬರು ಪರಿಚಯಿಸುವ ವೇದಿಕೆಯ ಕೊರತೆಯಿದ್ದು ಇಂತಹ ಧಾರ್ಮಿಕ ಸ್ಥಳಗಳಲ್ಲಿ ನಾವೆಲ್ಲರೂ ಒಂದಾಗುದರಿಂದ ಈ ಸಮಸ್ಯೆ ನಿವಾರಣೆಮಾಡೋಣ. ಮೂರು ದಿನಗಳ ಕಾಲ ನಡೆಯಲಿರುವ ದೇವಸ್ಥಾನದ ಭ್ರಹ್ಮ ಕಲಶಕ್ಕೆ ಎಲ್ಲರೂ ಬನ್ನಿ. ಸಮುದ್ರಕ್ಕೆ ನದಿ ಸೇರುವಂತೆ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂಬಯಿಗರೆಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.

ಜ್ಯೋತಿ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗಿಸಿ ಸಭೆಗೆ ಚಾಲನೆಯಿತ್ತರು. ಕು. ಲಾಸ್ಯಾ ಡಿ. ಕುಲಾಲ್ ಅವರು ಪ್ರಾರ್ಥನೆ ಮಾಡಿದರು.

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ದೇವದಾಸ ಕುಲಾಲ್ ಮಾತನಾಡುತ್ತಾ ನಮ್ಮ ಸಮಾಜದ ಕುಲದೇವರಾದ ಶ್ರೀ ವೀರನಾರಾಯಣ ದೇವರ ಆಶೀರ್ವಾದ ನಮಗಿದೆ. 1937 ರ ನಂತರ ಈ ದೇವಸ್ಥಾನದ ಆಡಳಿತ ನಮ್ಮ ಸಮಾಜಕ್ಕೆ ಸೇರಿದೆ. ದೇವಸ್ಥಾನದ ಅಭಿವೃದ್ದಿಗಾಗಿ ಮುಂಬಯಿಯ ಮಹಾದಾನಿ ಬಂಟ್ವಾಳ ಬಾಬು ಸಾಲ್ಯಾನ್ ಹಾಗೂ ಇತರ ಹಿರಿಯರ ಕೊಡುಗೆ ಅಪಾರ. ದೇವಸ್ಥಾನದ ಸೇವಾ ಕಾರ್ಯದಲ್ಲಿ ಬಾಗವಹಿಸುವ ಸೌಭಾಗ್ಯ ನನಗೂ ದೊರಕಿದೆ. ಊರಿನ ಪ್ರತಿಯೊಂದು ಕಾರ್ಯಕ್ಕೂ ಮುಂಬಯಿಗರು ಸಕ್ರಿಯರಾಗುತ್ತಿರುವುದು ಇಲ್ಲಿನ ವಿಶೇಷತೆ. ಈ ಕಾರ್ಯಕ್ಕೆ ಮುಂಬಯಿಯ ನಮ್ಮವರ ಸಹಕಾರವಿದೆ. ಸಮಾಜ ಬಾಂಧವರು ಸಾಧ್ಯವಾದಷ್ಟು ಸಹಕರಿಸಬೇಕು.ಮುಂಬಯಿಯ ಪತ್ರಕರ್ತ, ಸಮಾಜ ಸೇವಕ ದಿನೇಶ್ ಕುಲಾಲ್ ಅವರನ್ನು ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮುಂಬಯಿಯ ಅಧ್ಯಕ್ಷರನ್ನಾಗಿ ನೇಮಿಸುದರೊಂದಿಗೆ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಮಂಗಳೂರಿನ ಕುಲಾಲ ಭವನ ಒಂದೇ ಸಮಯದಲ್ಲಿ ಲೋಕಾರ್ಪಣೆಗೊಳ್ಳಲಿ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ವೀರನಾರಾಯಣ ಸೇವಾ ಟ್ರಸ್ಟಿನ ಕಾರ್ಯಾಧ್ಯಕ್ಷ ಪ್ರೇಮಾನಂದ ಕುಲಾಲ್ , ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಕುಲಾಲ್ ಕಲ್ಬಾವಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎ ದಾಮೋದರ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕ ಸುರೇಶ್ ಬಿ. ಕುಲಾಲ್, ಕ್ಷೇತ್ರದ ಮೊಕ್ತೇಸರರಾದ ಗಿರಿಧರ್ ಜೆ ಮೂಲ್ಯ , ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾದ ರಮಾನಂದ ಬಂಗೇರ, ನಾಸಿಕ್, ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ರಘು ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್ ಮಾತನಾಡಿ ಕುಲಾಲ ಸಮಾಜದ ಕುಲದೇವರಾದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರೆಕ್ಕೆ ಎಲ್ಲರೂ ಸಹಕರಿಸಬೇಕು ಹಾಗೂ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಭ್ರಹ್ಮಕಲಶಕ್ಕೆ ಎಲ್ಲರೂ ಆಗಮಿಸಬೇಕೆಂದರು.

ಕುಲಾಲ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಅವರು ಎಲ್ಲರನ್ನೂ ಸ್ವಾಗತಿಸುತ್ತಾ ಕುಲಾಲ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತರು.

ಕುಲಾಲ ಸಂಘ ಮುಂಬಯಿಯ ಕೋಶಾಧಿಕಾರಿ ಜಯ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಊರಿನಿಂದ ಆಗಮಿಸಿದ ಗಣ್ಯರು ಶ್ರೀ ವೀರನಾರಾಯಣ ದೇವರ ಭಾವ ಚಿತ್ರವನ್ನು ದೇವದಾಸ ಕುಲಾಲ್ ಮತ್ತು ಗಿರೀಶ್ ಬಿ. ಸಾಲ್ಯಾನ್ ಅವರಿಗೆ ಹಸ್ತಾಂತರಿಸಿದರು. ಆನಂದ ಮೂಲ್ಯ ಅವರು ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

ಸಭೆಗೆ ಮೊದಲು ಗಣೇಶ್ ಎರ್ಮಾಲ್ ಅವರಿಂದ ಭಕ್ತಿ ಗೀತೆ ಮತ್ತು ಪೊವಾಯಿ ನಟನ ನೃತ್ಯ ಅಕಾಡೆಮಿ ವಿದುಷಿ ಗೀತಾ ಸಾಲಿಯಾನ್ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ನಡೆಯಿತು.

ಸುಚಿತಾ ಬಂಜನ್ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದ್ದು, ರತ್ನಾ ಡಿ. ಕುಲಾಲ್ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.

ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆ

ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮುಂಬಯಿಯ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ, ಸಮಾಜ ಸೇವಕ ದಿನೇಶ್ ಕುಲಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಿ ಸನ್ಮಾನಿಸಲಾಯಿತು. ದಿನೇಶ್ ಕುಲಾಲ್ ಅವರ ನೇತೃತ್ವದಲ್ಲಿ ಮುಂಬಯಿ ಸಮಿತಿಯನ್ನು ರಚಿಸಿದ್ದು ಎಲ್ಲರೂ ಇವರೊಂದಿಗೆ ಪ್ರೋತ್ಸಾಹಿಸಿ ಸಹಕರಿಸಬೇಕು ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್ ವಿನಂತಿಸಿದರು.


Spread the love