ಕುಶಾಲನಗರದಲ್ಲಿ ಕಳೆಗಟ್ಟಿದ ಜಾತ್ರಾ ಸಂಭ್ರಮ

Spread the love

ಕುಶಾಲನಗರದಲ್ಲಿ ಕಳೆಗಟ್ಟಿದ ಜಾತ್ರಾ ಸಂಭ್ರಮ

ಕುಶಾಲನಗರ:ಸಂಜೆಯಾಗುವುದೇ ತಡ, ಕುಶಾಲನಗರ ಪಟ್ಟಣದ ಜನರೆಲ್ಲ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದತ್ತ ಮುಖ ಮಾಡುತ್ತಿದ್ದಾರೆ. ಚುಮು ಚುಮು ಚಳಿಯನ್ನು ಲೆಕ್ಕಿಸದೆ ಇಲ್ಲಿಯ ಸಾಂಸ್ಕೃತಿಕ ವೇದಿಕೆ ಮುಂದೆ ಜನಜಾತ್ರೆ ಸೇರುತ್ತದೆ. ಮರಣ ಬಾವಿಯ ಬೈಕ್‌ಗಳ ಕಿವಿಗಪ್ಪಳಿಸುವ ಶಬ್ದದ ಮಧ್ಯೆ ರಾತ್ರಿ ತನಕ ಜಾತ್ರೆಯ ರಂಗು ರಂಗೇರುತ್ತದೆ.

ಕುಶಾಲನಗರದ ಶ್ರೀ ಮಹಾಗಣಪತಿ ರಥೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ರೆ ಈ ಬಾರಿ ಕಳೆಗಟ್ಟಿದೆ. ಕೊರೊನಾ ಕಾರಣಕ್ಕೆ ಎರಡು ವರ್ಷ ಸರಳವಾಗಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಈಗ ಸಂಭ್ರಮ ಎದ್ದು ಕಾಣುತ್ತಿದೆ. ಪ್ರತಿ ದಿನ ನಡೆಯುತ್ತಿರುವ ವೈವಿಧ್ಯಮಯ ಸಾಂಸ್ಕೃತಿಕ ಕಲರವಗಳು ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಜನಸಂದಣಿ ಹೆಚ್ಚುತ್ತಲೇ ಇದೆ.

ರಥೋತ್ಸವ ಕಳೆದ ನಂತರ ಪ್ರತಿದಿನ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಟ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ವೈವಿಧ್ಯಮಯವಾಗಿ ಮೂಡಿಬರುತ್ತಿದೆ. ದಿನಕಳೆದಂತೆ ಹೆಚ್ಚುತ್ತಿರುವ ಪ್ರೇಕ್ಷಕರ ಸಂಖ್ಯೆಯೇ ಇದಕ್ಕೆ ಸಾಕ್ಷಿ ಹೇಳುತ್ತಿದೆ.

ಕವಿಗೋಷ್ಠಿ, ಹಾಡು, ನೃತ್ಯ, ಮಿಮಿಕ್ರಿ, ರಸಮಂಜರಿ, ಜಾದೂ ಪ್ರದರ್ಶನ, ಅಂತ್ಯಾಕ್ಷರಿ, ಸಂಗೀತ… ಹೀಗೆ ಪ್ರತಿ ದಿನವೂ ವೇದಿಕೆಯಲ್ಲಿ ಕಲಾಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಾಗುತ್ತಿದೆ. ವಿ.ಪಿ. ಶಶಿಧರ್ ನೇತೃತ್ವದ ಸಾಂಸ್ಕೃತಿಕ ಸಮಿತಿಗೆ ಟಿ.ಆರ್. ಪ್ರಭುದೇವ್, ಬಿ.ಎಸ್. ಲೋಕೇಶ್ ಸಾಗರ್, ಪರಮೇಶ್ ಸಾಗರ್, ಆನಂದ್ ಕುಮಾರ್ ಮತ್ತಿತರ ಉತ್ಸಾಹಿಗಳು ಕೈ ಜೋಡಿಸುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ದುಡಿಯುತ್ತಿದ್ದಾರೆ.

ಮನೋರಂಜನಾ ಚಟುವಟಿಕೆಗಳೂ ಸಾರ್ವಜನಿಕರನ್ನು ಸೆಳೆಯುತ್ತಿದೆ. ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ವಿವಿಧ ಆಟಗಳು ಇಲ್ಲಿ ಲಭ್ಯವಿದೆ. ಬಟ್ಟೆಯಿಂದ ಪಾತ್ರೆ ತನಕ ವಸ್ತುಗಳ ಖರೀದಿಗೂ ಅವಕಾಶವಿದೆ. ಇಲ್ಲಿಗೆ ಬಂದರೆ ಊಟಿ ಸಿಹಿ ಜೋಳದಿಂದ ಬೆಂಗಳೂರು ಹಪ್ಪಳದ ವರೆಗೆ ಬಾಯಿಯಲ್ಲಿ ನೀರೂರಿಸುವ ತಿಂಡಿ, ತಿನಿಸುಗಳ ರುಚಿಯನ್ನೂ ಸವಿಯಬಹುದಾಗಿದೆ.


Spread the love

Leave a Reply

Please enter your comment!
Please enter your name here