ಕುಶಾಲನಗರದಲ್ಲಿ ಬಂದ್ ಬದಲಿಗೆ ಪ್ರತಿಭಟನಾ ಮೆರವಣಿಗೆ

Spread the love

ಕುಶಾಲನಗರದಲ್ಲಿ ಬಂದ್ ಬದಲಿಗೆ ಪ್ರತಿಭಟನಾ ಮೆರವಣಿಗೆ

ಕುಶಾಲನಗರ: ಸೋಮವಾರ ಬಂದ್ ಬದಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಕೊಡಗು ಜನಾಂದೋಲನ ಪ್ರಮುಖ ವಿ.ಪಿ.ಶಶಿಧರ್ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಕೊರೊನದಿಂದಾಗಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ ಈ ನಡುವೆ ಬಂದ್ ಮಾಡಿಸಿ ನಮ್ಮವರಿಗೆ ನಾವೇ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಸದುದ್ದೇಶವಾಗಬೇಕು ಎಂದರು.

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಐತಿಹಾಸಿಕವಾದುದು. ಸಂವೇದನಾ ಇಲ್ಲದ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ರೈತರನ್ನು ಭಿಕ್ಷುಕನಾಗಿಸುವ ಪರಿಸ್ಥಿತಿ ಎದುರಾಗಲಿದೆ. ಈ ಕೆಟ್ಟ ಧೋರಣೆಯನ್ನು ಖಂಡಿಸಿ ಹೋರಾಡಬೇಕಿದೆ ಎಂದರು.

ಈ ಸಂದರ್ಭ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರದ ರೈತ ವಿರೋಧ ನೀತಿ ಕೃಷಿ ಮಾರುಕಟ್ಟೆ ನೀತಿ ತಿದ್ದುಪಡಿ ಮಾಡುವುದರ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಯ ಸಂಪೂರ್ಣ ಅಧಿಕಾರವನ್ನು ಮೊಟಕು ಗೊಳಿಸಲಾಗುತ್ತಿದೆ ಇಂತಹ ಕೆಟ್ಟ ನೀತಿಯನ್ನು ರದ್ದು ಪಡಿಸಬೇಕು ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ಹಸಿರು ಸೇನೆಯ ಕುಶಾಲನಗರ ತಾಲೂಕು ಅಧ್ಯಕ್ಷ ಜವರಪ್ಪ ಮಾತನಾಡಿ ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಯಿಂದ ರೈತರು ಜೀವನ ನಡೆಸುವುದೇ ಮುಂದಿನ ದಿನಗಳಲ್ಲಿ ಕಷ್ಟಕರ ವಾಗಲಿದೆ. ರೈತರು ಬೆಳೆದ ಬೆಳೆಗಳಿಂದ ಜೀವನ ನಡೆಸುವ ಮೋದಿ ರೈತರ ವಿರೋಧ ನೀತಿ ಜಾರಿಗೆ ತಂದಿರುವುದು ನೋವಿನ ಸಂಗತಿ. ಬಂದ್ ಆಚರಿಸಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಬೇಡ ಪ್ರತಿಭಟಿಸಿ ಮನವಿ ಸಲ್ಲಿಸೋಣ ಎಂದರು.

ಸಭೆಯಲ್ಲಿ ಯಾವುದೇ ಪಕ್ಷ ಅಥವಾ ಸಂಘಟನೆಗಳ ಶಾಲು ಅಥವಾ ಧ್ವಜಗಳನ್ನು ಬಳಸುವಂತಿಲ್ಲ ರೈತ ಪರ ಹೋರಾಟವಾಗಿರುವುದರಿಂದ ಹಸಿರು ಶಾಲು ಬಳಸಬಹುದು ಎಂದು ತೀರ್ಮಾನಿಸಲಾಯಿತು. ಬೆಳಗ್ಗೆ 10.30ಕ್ಕೆ ನಗರದ ಪ್ರವಾಸಿ ಮಂದಿರ ಮುಂಭಾಗದಿಂದ ಐಬಿ ರಸ್ತೆಯ ಮೂಲಕ ಕಾರ್ಯಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಬಳಿಕ ರಥಬೀದಿಯಾಗಿ ತಹಶೀಲ್ದಾರ್ ಕಚೇರಿ ತಲುಪಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಜು, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಕೃಷ್ಣ, ವಿವಿಧ ಪಕ್ಷ ಮತ್ತು ಸಂಘಟನೆಗಳ ಪ್ರಮಖರಾದ ಕಿರಣ್, ಭೀಮಯ್ಯ, ಭಾಷಾ, ಅಕ್ಮಲ್ ಸೇರಿದಂತೆ ಹಲವು ಮಂದಿ ಹಾಜರಿದ್ದರು.


Spread the love