ಕುಶಾಲನಗರದಲ್ಲಿ ವಂಚಕರ ಜಾಲ ಬಯಲು

Spread the love

ಕುಶಾಲನಗರದಲ್ಲಿ ವಂಚಕರ ಜಾಲ ಬಯಲು

ಕುಶಾಲನಗರ: ಕೊರಿಯರ್ ನಲ್ಲಿ ಕಳುಹಿಸುತ್ತಿದ್ದ ಮೊಬೈಲ್ ಕಂಪನಿಯ ಚಾರ್ಜರ್ ಗಳನ್ನು ಎಗರಿಸಿ ನಕಲಿ ಚಾರ್ಜರ್ ಗಳನ್ನು ನೀಡುವುದರೊಂದಿಗೆ ಮೊಬೈಲ್ ಕಂಪೆನಿಗೆ ಲಕ್ಷಾಂತರ ರೂ.ಗಳನ್ನು ವಂಚಿಸುತ್ತಿದ್ದ ವಂಚಕರ ಜಾಲವನ್ನು ಬಯಲುಗೊಳಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

ಮೊಬೈಲ್ ಕಂಪೆನಿಯೊಂದರ ನೌಕರ ಹಿತೇಶ್ ರೈ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಈತನಿಗೆ ಸಹಕರಿಸುತ್ತಿದ್ದ ಧರ್ಮ, ತೀರ್ಥೇಶ್, ಕೀರ್ತನ್, ವಿನಯ್ ಬಂಧಿತರು. ಹಿತೇಶ್ ರೈ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಧರ್ಮ, ತೀರ್ಥೇಶ್, ಕೀರ್ತನ್, ವಿನಯ್ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು, ಹೀಗಾಗಿ ಮೊಬೈಲ್ ಅಂಗಡಿಗಳಿಗೆ ಕೊರಿಯರ್ ಮೂಲಕ ಕಂಪೆನಿಗಳು ಕಳುಹಿಸುವ ಚಾರ್ಜರ್ ಗಳನ್ನು ತೆಗೆದು ಅದರ ಬದಲಿಗೆ ಕಡಿಮೆ ಗುಣಮಟ್ಟದ ಚಾರ್ಜರ್ ಗಳನ್ನಿಟ್ಟು ಡೆಲಿವರಿ ನೀಡಲಾಗುತ್ತಿತ್ತು.

ಹೀಗಾಗಿ ಅಂಗಡಿಗಳಿಗೆ ಕಳುಹಿಸಿದ ಚಾರ್ಜರ್ ಗಳನ್ನು ಅಂಗಡಿಯವರು ರಿಜೆಕ್ಟ್ ಮಾಡಿ ಹಿಂತಿರುಗಿಸುತ್ತಿದ್ದರು. ಈ ಬಗ್ಗೆ ಅನುಮಾನ ಗೊಂಡ ಮೊಬೈಲ್ ಕಂಪೆನಿಯವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರನ್ನು ಆದರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 14.10.000 ನಗದು ಮತ್ತು 70ಸಾವಿರ ಬೆಲೆ ಬಾಳುವ ಚಾರ್ಜರ್ ಗಳು ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕುಶಾಲನಗರ ಟೌನ್ ಪಿಎಸ್ ಐ ಅಪ್ಪಾಜಿ, ಪ್ರೊಬೇಷನರಿ ಪಿಎಸ್ ಐ ಕಾಶಿನಾಥ ಬಗಲಿ, ಎಎಸ್ ಐ ಗಣಪತಿ, ಸಿಬ್ಬಂದಿಗಳಾದ ಜಯಪ್ರಕಾಶ್, ಅರುಣ್ ಕುಮಾರ್, ಸಂದೀಪ್, ಮನೋಜ್ ಕುಮಾರ್, ಸಿದ್ದರಾಜು, ಸೌಮ್ಯ, ರಾಜೇಶ್, ಗಿರೀಶ್, ಪ್ರವೀಣ್, ಯೋಗೇಶ್ ಭಾಗವಹಿಸಿದ್ದರು.

ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದ್ದಾರೆ.


Spread the love

Leave a Reply

Please enter your comment!
Please enter your name here