ಕೂಲಿ ಅರಸಿ ಬಂದ ಮಹಿಳೆಗೆ ಒಲಿದ ಪಂಚಾಯತ್ ಅಧ್ಯಕ್ಷೆ ಪಟ್ಟ!

Spread the love

ಕೂಲಿ ಅರಸಿ ಬಂದ ಮಹಿಳೆಗೆ ಒಲಿದ ಪಂಚಾಯತ್ ಅಧ್ಯಕ್ಷೆ ಪಟ್ಟ!

  • ಈಗಲೂ ಮುಸುರೆ ತಿಕ್ಕುವ ಕಾಯಕ ಮುಂದುವರೆಸುತ್ತಿರುವ ಭೀಮವ್ವ. ಬಡ ಜನರ ಕಣ್ಣೀರು ಒರೆಸೋಕು ಸೈ

ಕುಂದಾಪುರ: ಆಕೆ ಕೂಲಿ ಕೆಲಸ ಅರಸಿ ಊರಿಂದೂರಿಗೆ ಅಲೆಯುವ ಬಡ ಮಹಿಳೆ. ಹೀಗೆ ಊರಿಂದೂರಿಗೆ ಅಲೆಯುವಾಗ ನೆಲೆಯಾಗಿದ್ದು ಕೃಷ್ಣನಗರಿ ಉಡುಪಿ.. ಇಲ್ಲೇ ಎರಡು ದಶಕಗಳ ಕಾಲ ಜಿಲ್ಲೆಯ ಹಲವೆಡೆ ಕೂಲಿ ಕೆಲಸ ಮಾಡಿದ್ದ ಈ ಮಹಿಳೆ ಈಗ ಪಂಚಾಯತ್ ಅಧ್ಯಕ್ಷೆಯಾಗಿ ಒಂದು ಗ್ರಾಮದ ಚುಕ್ಕಾಣಿಯನ್ನೇ ಹಿಡಿದಿದ್ದಾರೆ.

ಹೀಗೆ ಮುಸುರೆ ತಿಕ್ಕುತ್ತಾ ಪಾತ್ರೆಗಳನ್ನ ಸ್ವಚ್ಚಗೊಳಿಸೋ ಕೂಲಿ ಕೆಲಸದಲ್ಲಿ ನಿರತರಾಗಿರೋ ಈಕೆಯ ಹೆಸರು ಬೀಮವ್ವ. ಬಾಗಲಕೋಟೆ ಮೂಲದ ಬೀಮವ್ವ ಕಳೆದ 27 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿ ವಿವಿಧ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಸಧ್ಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಜನರ ಮನಸ್ಸನ್ನ ಗೆದ್ದು ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ‌. ಇನ್ನು ಈಕೆ ಉಡುಪಿಯಲ್ಲೇ ತನ್ನ ನಾಲ್ಕು ಮಕ್ಕಳನ್ನ ಓದಿಸಿ ಓರ್ವ ಮಗನನ್ನ ದೇಶ ಕಾಯುವ ಯೋಧನಾಗಿ ಮಾಡಿದ್ಧಾಳೆ ಬೀಮವ್ವ. ಹೀಗೆ ಉಡುಪಿಯಲ್ಲೇ ಅರ್ಧ ಜೀವನ ಕಳೆದ ಬೀಮವ್ವ ಪಂಚಾಯತ್ ಅಧ್ಯಕ್ಷೆಯಾಗಿದ್ರೂ ಕೂಡ ಮೂಲ ಕಸುಬು ಕೂಲಿ ಕೆಲಸ ಇನ್ನೂ ಬಿಟ್ಟಿಲ್ಲ ಅನ್ನೋದೇ ವಿಶೇಷ.

ಕೂಲಿ ಕೆಲಸಕ್ಕೆ ಅರಸಿ ಬಂದಿದ್ದ ಭೀಮವ್ವ ಭೀಮವ್ವ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದೇ ಸ್ವಾರಸ್ಯ. ಕಳೆದ ಕೆಲ ವರ್ಷಗಳ ಹಿಂದೆ ಕಾಪು ತಾಲೂಕಿನಿಂದ ಕುಂದಾಪುರ ತಾಲೂಕಿಗೆ ಕೂಲಿ ಕೆಲಸಕ್ಕೆ ಅರಸಿ ಬಂದಿದ್ದ ಭೀಮವ್ವ ಅವರನ್ನು ತಲ್ಲೂರು ಪಂಚಾಯತ್ ಮಾಜಿ ಸದಸ್ಯ ಕರಣ್ ಕುಮಾರ್ ಎಂಬುವರು ಪಂಚಾಯತ್‌ನ ಕೂಲಿ ಕೆಲಸಕ್ಕೆ ನಿಯೋಜಿಸಿದ್ದರು. ಹೀಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಮಗನನ್ನು ದೇಶ ಕಾಯುವ ಯೋಧನಾಗಿ ಮಾಡಿರುವ ಈಕೆ ತನ್ನ ಗ್ರಾಮದ ಸೇವೆ ಪ್ರಾಮಾಣಿಕವಾಗಿ ಮಾಡುತ್ತಾರೆ ಅನ್ನುವುದನ್ನು ಅರಿತ ಕರಣ್, ಭೀಮವ್ವನ ಮನವೊಲಿಸಿ ಚುನಾವಣೆಯಲ್ಲಿ ಎಸ್‌ಟಿ ಮೀಸಲಾತಿ ಇದ್ದ ಸ್ಥಾನಕ್ಕೆ ಅಭ್ಯರ್ಥಿಯಾಗಿಸುತ್ತಾರೆ.

ಹೀಗೆ ಚುನಾವಣೆಗೆ ನಿಂತ ಬೀಮವ್ವ ಇಡೀ ಗ್ರಾಮದ ಮತದಾರರ ಮನಸ್ಸನ್ನ ಗೆಲ್ಲಲು ಯಶಸ್ವಿಯಾಗಿ ಗೆದ್ದ ಬಳಿಕವೂ ಮತದಾರರ ನಂಬಿಕೆಯನ್ನ ಉಳಿಸಿಕೊಂಡು ಬಂದಿದ್ದಾರೆ ಬೀಮವ್ವ. ನಿಜವಾದ ಬಡತನದ ಕಷ್ಟ, ಆಧಾರ್, ರೇಷನ್ ಕಾರ್ಡ್ ನಂತಹ ಸೇವೆಗಳಿಗೆ ಅಲೆದಾಟದ ಕಷ್ಟವನ್ನು ಅನುಭವಿಸಿರುವ ಬೀಮವ್ವ ಇದೀಗ ಅಧ್ಯಕ್ಷೆಯಾಗಿ ಗ್ರಾಮದ ಜನರನ್ನ ಪ‌ಂಚಾಯತ್ ಕಚೇರಿಯಲ್ಲಿ ಕಾಯುವ ಕಷ್ಟವನ್ನ ಈವರೆಗೂ ಕೊಟ್ಟಿಲ್ಲವಂತೆ. ಜನರ ಸೇವೆಗೆ ತಕ್ಷಣ ಸ್ಪಂದಿಸಿ ಗ್ರಾಮದ ಜನರ ನಂಬಿಕೆ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ ಬೀಮವ್ವ.

ಭೀಮವ್ವ ಇಂದು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದರೂ ತಾನು ನಡೆದು ಬಂದ ಹಾದಿಯನ್ನು ಮಾತ್ರ ಇಂದೂ ಮರೆತಿಲ್ಲ. ತನ್ನ ಬದುಕಿನ ಅದ್ಭುತ ಜರ್ನಿಯ ಬಗ್ಗೆ ಭೀಮವ್ವ ಹೇಳಿದ್ದು ಇಷ್ಟು, “ಕಳೆದ 27 ವರ್ಷಗಳ ಹಿಂದೆ ದುಡಿಮೆಯೊಂದನ್ನೇ ನಂಬಿ ಉಡುಪಿ ಜಿಲ್ಲೆಗೆ ಕುಟುಂಬ ಸಮೇತ ಬಂದೆ. ಮೊದಲು ರಸ್ತೆ ನಿರ್ಮಾಣ ಕಾಮಗಾರಿ ಕೆಲಸ ಮಾಡಿದೆ. ಆ‌ ಬಳಿಕ‌ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಗುತ್ತಿಗೆದಾರ ತೋರಿದ ಕೆಲಸವನ್ನು ಮಾಡಿಕೊಂಡು ಬಂದೆ. ನಮಗಾದ ಕಷ್ಟ ನಮ್ಮ ಮಕ್ಕಳಿಗೆ ಆಗಬಾರದೆಂದು ನಾಲ್ಕೂ ಮಕ್ಕಳನ್ನು ಶಾಲೆಗೆ ಕಳುಹಿಸಿದೆ. ಅದರಲ್ಲಿ ಓರ್ವ ಮಗ ಸೈನಿಕನಾಗಿದ್ದಾನೆ”. “ಕುಂದಾಪುರದ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ತನಗೆ ತಮ್ಮನ ಸ್ಥಾನದಲ್ಲಿ‌ ನಿಂತು ಕರಣ್ ಎಂಬುವವರು ಮೊದಲು ಚುನಾವಣೆಗೆ ನಿಲ್ಲಲು ಸೂಚಿಸಿದರು. ಬಡವರಿಗೆ ಈ ಚುನಾವಣೆ ಒಗ್ಗಲ್ಲ ಅಂತಾ ಹೇಳಿದರೂ ಅವರೇ ಮುಂದೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿದರು. ಆ‌ ಬಳಿಕ ಪಂಚಾಯತ್ ಅಧ್ಯಕ್ಷೆಯೂ ಆಗಿದ್ದೇನೆ. ಅಧ್ಯಕ್ಷೆ ಆಗಿದ್ದೇನೆ ಎನ್ನುವ ಅಹಂಕಾರ ತಲೆಗೆ ಬಂದಿಲ್ಲ. ಈಗಲೂ ಕೂಲಿ ಕೆಲಸಕ್ಕೆ ಹೋಗುತ್ತೇನೆ. ಮಧ್ಯಾಹ್ನದ ವೇಳೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಗ್ರಾಮ ಪಂಚಾಯತ್‌ಗೆ ಬಂದು ಕೆಲಸ ಮಾಡುತ್ತೇನೆ,” ಅಂತಾ ಹೆಮ್ಮೆಯಿಂದ ಹೇಳುತ್ತಾರೆ.

ಒಟ್ಟಾರೆ ಸಂಕಷ್ಟದ ಸಮಯದಲ್ಲೂ ಪ್ರಾಮಾಣಿಕತೆ ಗಟ್ಟಿಯಾಗಿದ್ದರೆ ದೇವರು ಕೈಬಿಡೋಲ್ಲ ಅನ್ನೋರು ಬೀಮವ್ವ ಜೀವನದಲ್ಲಿ ಸಾಬೀತಾಗಿದೆ. ಪ್ರಾಮಾಣಿಕ ಜನಪರ ಕೆಲಸ ಮತದಾರರ ಮನಸ್ಸನ್ನ ಗೆಲ್ಲಬಹುದು ಅನ್ನೋದನ್ನ ಬೀಮವ್ವ ತೋರಿಸಿಕೊಟ್ಟಿದ್ದಾರೆ. ಬೀಮವ್ವ ಅವರ ಸರಳ ಪ್ರಾಮಾಣಿಕ ಜೀವನ ಸೀಟಿಗಾಗಿ ತಿಕ್ಕಾಟ ನಡೆಸೋ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕಿದೆ.


Spread the love