
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಅಗತ್ಯ: ಸಿ.ಎಸ್.ಪುಟ್ಟರಾಜು
ಮಂಡ್ಯ: ಕೃಷಿಯಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ, ರೈತರು ಹೊಸದಾಗಿ ಕೃಷಿ ವಿಜ್ಞಾನಿಗಳು ಪರಿಚಯಿಸುವ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.
ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಮೀನು ಹೊಂದಿರುವ ಶ್ರೀಮಂತ ಮಾಲೀಕರು ಕೃಷಿಯನ್ನು ಕೆಲವು ಕೃಷಿ ಕಾರ್ಮಿಕರ ಸಹಾಯದಿಂದ ಹವ್ಯಾಸಕ್ಕಾಗಿ ನಡೆಸುತ್ತಾರೆ. ಆದರೆ ಪೂರ್ಣ ಕುಟುಂಬ ಕೃಷಿಯಲ್ಲೇ ತೊಡಗಿಕೊಂಡು ಜೀವನ ನಡೆಸುತ್ತಿರುವವರಿಗೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕು. ಸರ್ಕಾರ ಒದಗಿಸುವ ಸವಲತ್ತುಗಳು ಅವರಿಗೆ ತಲುಪಬೇಕು.
ಕೃಷಿ ಮೇಳದಲ್ಲಿ ಹಲವಾರು ಸುಧಾರಿತ ತಳಿ, ಯಾವ ರೀತಿ ರೈತ ಕೆಲವು ಹೊಸ ಮಾದರಿಯನ್ನು ಅಳವಡಿಸಿಕೊಂಡು ರೈತರು ಜೀವನ ಕಟ್ಟಿಕೊಳ್ಳಬಹುದು ಎಂದು ವಿವಿಧ ಪ್ರತ್ಯಕ್ಷಿಕೆಗಳ ಮೂಲಕ ತಿಳಿಸಲಾಗಿದೆ. ರೈತರು ಮೇಳದಲ್ಲಿ ಮಾಹಿತಿ ಪಡೆದುಕೊಂಡು ಅರ್ಥೈಸಿಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದರು.
ಜಿಲ್ಲಾಧಿಕಾರಿ ಡಾ: ಎಚ್.ಎನ್.ಗೋಪಾಲ ಕೃಷ್ಣ ಅವರು ಮಾತನಾಡಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣ, ಹೆಚ್ಚು ಇಳುವರಿ ಹಾಗೂ ಆದಾಯ ತಂದು ಕೊಡುವ ಸುಧಾರಿತ ತಳಿಗಳನ್ನು ಅನಾವರಣಗೊಳಿಸಲಾಗಿದೆ. ವಿ.ಸಿ.ಫಾರಂನಲ್ಲಿ ನಿರಂತರವಾಗಿ ರೈತರ ಅಭಿವೃದ್ಧಿಗಾಗಿ ವಿವಿಧ ಸಂಶೋಧನಾ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ ಸುರೇಶ್ ಅವರು ಮಾತನಾಡಿ ಸಂಶೋಧನಾ ಕೇಂದ್ರವಾದ ವಿ.ಸಿಫಾರಂನಲ್ಲಿ ಮಂಡ್ಯ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಯ ರೈತರಿಗೆ ಕೃಷಿ ನಡೆಸಲು ಬೇಕಿರುವ ತಾಂತ್ರಿಕತೆಯ ಬಗ್ಗೆ ತಿಳಿದುಕೊಂಡು ಕೃಷಿ ಮೇಳದಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಸುಧಾರಿತ ತಳಿಗಳು ಹಾಗೂ ಬಿಡುಗಡೆಗೆ ಸಿದ್ಧವಿರುವ ತಳಿಗಳನ್ನು ಅನಾವರಣಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಾಣದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪರಾಣಿ, ಜಿಪಂ ಸಿಇಓ ಶಾಂತ ಎಲ್ ಹುಲ್ಮನಿ, ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎಸ್. ಪ್ರಕಾಶ್, ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್ ಶಿವಕುಮಾರ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ. ಕೆ.ಬಿ.ಉಮೇಶ್, ಪ್ರಾಧ್ಯಾಪಕ ಡಾ. ರಂಗನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.