ಕೃಷಿ ಮಾರುಕಟ್ಟೆಯಾಯ್ತು ಕಾಲೇಜ್ ಕ್ಯಾಂಪಸ್ – ನಿರೀಕ್ಷೆಗೂ ಮೀರಿ ಯಶಸ್ವಿಯಾದ ಕೃಷಿ ಸಮ್ಮಿಲನ

Spread the love

ಕೃಷಿ ಮಾರುಕಟ್ಟೆಯಾಯ್ತು ಕಾಲೇಜ್ ಕ್ಯಾಂಪಸ್ – ನಿರೀಕ್ಷೆಗೂ ಮೀರಿ ಯಶಸ್ವಿಯಾದ ಕೃಷಿ ಸಮ್ಮಿಲನ

ಉಡುಪಿ : ಒಂದೆಡೆ ಕೊರೋನಾದ ಆತಂಕ, ಇನ್ನೊಂದೆಡೆ ಜನರು ಬರುತ್ತಾರೋ ಇಲ್ಲವೋ ಎಂಬ ಅಧೈರ್ಯಗಳ ನಡುವೆ ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿಯ ಆಸಕ್ತಿ ಹೆಚ್ಚಿಸುವ ಸಲುವಾಗಿ ಏರ್ಪಡಿಸಿದ್ದ ‘ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ’ ಎಂಜಿಎಂ ಕೃಷಿ ಸಮ್ಮಿಲನ ಮೊದಲ ದಿನ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.

ಹಿರಿಯಡ್ಡ ಸಮೀಪದ ಮುಂಡುಜೆಯ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಅವರು ತಾವೇ ಬೆಳೆಸಿದ್ದ ಹರಿವೆಯನ್ನು ವ್ಯಾನ್ನಲ್ಲಿ ತಂದಿಳಿಸುತ್ತಿದ್ದಂತೆ, ಜನರು ಅದಕ್ಕಾಗಿಯೇ ಕಾಯುತಿದ್ದರೇನೋ ಎಂಬಂತೆ ಮುತ್ತಿಕೊಂಡು ಖರೀದಿಸಿ ಖಾಲಿ ಮಾಡಿದರು.

ಅದೇ ರೀತಿ ಮಾರಾಟವಾಗುತ್ತದೋ ಇಲ್ಲವೋ ಎಂಬ ಅಳುಕಿನಿಂದಲೇ ರೈತರು ತಂದಿದ್ದ ಬೆಂಡೆ, ಅಲಸಂಡೆ, ಬಸಳೆ ಇತ್ಯಾದಿ ತರಕಾರಿಗಳು ಕೂಡ ಬೆಳಗ್ಗೆ 11 ಗಂಟೆಯೊಳಗೆ ಖಾಲಿಯಾಯಿತು. ಸಂಘಟಕರಿಗೆ ಮಧ್ಯಾಹ್ನ, ಸಂಜೆ ಹೊತ್ತಿಗೆ ಬರುವ ಗ್ರಾಹಕರಿಗೆ, ಜನರಿಗೆ ಏನನ್ನು ತೋರಿಸುವುದು ಎಂಬ ಚಿಂತೆ ಆರಂಭವಾಗಿ, ಅವರ ಆಗ್ರಹದಂತೆ ಕೆಲವು ರೈತರು ಮತ್ತೆ ಹೊಲಗಳಿಂದ ತರಕಾರಿಗಳನ್ನು ತರಿಸಿಕೊಂಡರು.

10 ರು.ಗೆ ಒಂದು ಪ್ಯಾಕೆಟ್ನಂತೆ ವಿವಿಧ ತರಕಾರಿ ಬೀಜಗಳನ್ನು ವಿದ್ಯಾರ್ಥಿಗಳು ಮಾರುತ್ತಿ ದ್ದರು, ಅದಕ್ಕೂ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. 5 ರು.ಗೊಂದರಂತೆ ಅಂಗಾಶ ಕಸಿ ಮಾಡಿದ ಪಚ್ಚೆ ಬಾಳಿಗಿಡಗಳೂ ಹಾಟ್ಕೇಕ್ನಂತೆ ಮಾರಾಟ ವಾದವು. ಇಲ್ಲಿನ ನಿಟ್ಟೂರು ಶಾಲೆಯ ವಿದ್ಯಾರ್ಥಿ ಗಳು ಕಳೆದ ಮಳೆಗಾಲದಲ್ಲಿ ಹಡಿಲು ಗದ್ದೆಯಲ್ಲಿ ಬೆಳೆಸಿದ್ದ ಬತ್ತದಿಂದ ತಯಾರಿಸಿ ಸುವರ್ಣಾಕಜೆ ಅಕ್ಕಿ ಕೆಜಿಗೆ 50 ರು.ಗೂ ಬೇಡಿಕೆ ಚೆನ್ನಾಗಿತ್ತು.

ಕಪ್ಪು ಕಲ್ಲಂಗಡಿ, ಬಳಿ ಕಲ್ಲಂಗಡಿ ಮತ್ತು ಅನಾನಸು ಹಣ್ಣನ್ನು ತಂದಿದ್ದರಿಂದ ಸಂಜೆವರೆಗೆ ಮಾರಾಟ ಮಾಡುವುದಕ್ಕೆ ಸಾಧ್ಯವಾಯಿತು. ಕಾಲೇಜಿನ ಕ್ಯಾಂಪಸ್ನ ಅಲ್ಲಲ್ಲಿ ಮರಗಳಡಿಯಲ್ಲಿ ಹಣ್ಣು ತರಕಾರಿಗಳ ಜೊತೆಗೆ ಕೃಷಿ ಯಂತ್ರೋಪಕರಣಗಳು, ಕಾಂಪೋಸ್ಟ್ – ಎರೆಹುಳು ಗೊಬ್ಬರ, ಹಪ್ಪಳ ಸಂಡಿಗೆ ಉಪ್ಪನಕಾಯಿಗಳ ಮಾರಾಟ, ಹೂವಿನಹಣ್ಣಿನ ಗಿಡಗಳ ಮಾರಾಟವೂ ಭರ್ಜರಿಯಾಗಿತ್ತು. ಆದಿತ್ಯವಾರ ಕೂಡ ಪ್ರದರ್ಶನ ಮಾರಾಟ ಇದೆ, ಆದಿತ್ಯವಾರವಾದ್ದರಿಂದ ಇನ್ನೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ.

ಅಪರೂಪದ ಕಾಡುತ್ಪತ್ತಿಗಳ ಪ್ರದರ್ಶನ

ಕೃಷಿಪ್ರೇಮಿ ಪುರುಷೋತ್ತಮ ಅಡ್ವ ಅವರು ಸುಮಾರು 25ಕ್ಕೂ ಹೆಚ್ಚು ಬಗೆಯ ಕಾಡು ಉತ್ಪತ್ತಿಗಳನ್ನು ಸಂಗ್ರಹಿಸಿ ತಂದು ಪ್ರದರ್ಶನಕ್ಕಿಟ್ಟಿದ್ದು ಎಲ್ಲರ ಗಮನ ಸೆಳೆಯಿತು. ಇಲ್ಲಿ ಹಣ್ಣು ಹೂವು, ಗೆಡ್ಡೆಗಳಿಗೆ ಹೆಸರು ಬರೆದಿಟ್ಟಿರಲಿಲ್ಲ. ಜನರೇ ಅವುಗಳನ್ನು ಗುರುತಿಸಿ ಹೇಳಬೇಕು ಎಂಬ ಸವಾಲು ಇಲ್ಲಿತ್ತು. ಆದರೆ ಬಹುತೇಕ ಜನರು ಅವುಗಳನ್ನು ಗುರುತಿಸಲಾಗದೇ ಅಡ್ಡೆ ಅವರಲ್ಲಿ ಕೇಳುತಿದ್ದರು. ಜಾರಿಗೆಹುಳಿ, ವಾಟೆ ಹುಳಿ, ಪುನರ್ಪುಳಿ, ನೋಣಿ, ಕಾಡು ಅಡಕೆ, ನಾಣಿಲ ಕಾಯಿ, ಗರುಡಫಲ, ಮಹಾಕೇತ, ಬಂದಕಾಯಿ, ಕುಕ್ಕುಶುಂಠಿ ಇತ್ಯಾದಿ ದೇಶಿ ಕಾಡುಉತ್ಪನ್ನಗಳ ಜೊತೆಗೆ ವೆಲ್ವೆಟ್ ಆಪಲ್, ಡುರಿಯಾನ್, ಗಾರ್ನೆಶಿಯ, ಮಲೇಶಿಯನ್ ಗ್ರೇಪ್, ಎಲೆಫಂಟ್ ಆಪಲ್ ಇತ್ಯಾದಿ ವಿದೇಶಿ ಕಾಡುತ್ಪತ್ತಿಗಳು ಇಲ್ಲಿದ್ದವು.


Spread the love