ಕೃಷಿ ಮೂಲಭೂತ ಸೌಕರ್ಯಕ್ಕೆ ರೂ. 1.30 ಲಕ್ಷ ಕೋಟಿ ಮೀಸಲು: ಸಚಿವೆ ಶೋಭಾ ಕರಂದ್ಲಾಜೆ

Spread the love

ಕೃಷಿ ಮೂಲಭೂತ ಸೌಕರ್ಯಕ್ಕೆ ರೂ. 1.30 ಲಕ್ಷ ಕೋಟಿ ಮೀಸಲು: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಕೃಷಿ ಮೂಲಭೂತ ಸೌಕರ್ಯಕ್ಕೆ ಕೇಂದ್ರ ಬಜೆಟ್‌ನಲ್ಲಿ 1.30 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಗುರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ ‘ನಾವು ಸೇವಿಸುವ ಖಾದ್ಯ ತೈಲ ಕಲಬೆರಕೆ ಇದೆ. ಹಾಗಾಗಿ ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಎಣ್ಣೆ ಬೀಜವನ್ನು ಉಚಿತವಾಗಿ ನೀಡಲಾಗುವುದು. ಸಣ್ಣ ಉದ್ದಿಮೆ ಆರಂಭಿಸಲು ನೆರವು ಸಹ ನೀಡಲಾಗುವುದು’ ಎಂದರು.

ಅರಣ್ಯ ಇಲಾಖೆ ಕಠಿಣ ಕಾನೂನುಗಳಿಂದ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆಸಿದ ಮರ ಕಡಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲ ರೀತಿಯ ಮರಗಳನ್ನು ಕಡಿದು ಸಾಗಾಟ ಮಾಡುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗಿರುವ ಕಾಯ್ದೆ ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದರು.

‘ನರೇಂದ್ರ ಮೋದಿ ಈಗ ವಿಶ್ವಸಂಸ್ಥೆಗೆ ಹೋದರೆ ಎಲ್ಲ ದೇಶಗಳೂ ಗೌರವ ಕೊಡುತ್ತಿವೆ. ಹಿಂದಿನ ಪ್ರಧಾನಿಗೆ ಗೌರವ ಸಿಗುತ್ತಿರಲಿಲ್ಲ. ಮೋದಿ ಅಧಿಕಾರದಿಂದ ನಿರ್ಗಮಿಸುವಾಗ ಕೇವಲ ತಮ್ಮ ಬಟ್ಟೆಗಳಿರುವ ಸೂಟ್‌ಕೇಸ್‌ನೊಂದಿಗೆ ಮಾತ್ರ ನಿರ್ಗಮಿಸುತ್ತಾರೆ. ಭ್ರಷ್ಟಾಚಾರ ನಡೆಸಿದವರಿಗೆ ಇವರನ್ನು ಟೀಕಿಸುವ ಹಕ್ಕಿಲ್ಲ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ತನ್ನ ಸಂಪುಟದ ಸದಸ್ಯರನ್ನು ಲೋಕಸಭೆಗೆ ಪರಿಚಯಿಸಿಕೊಡಲು ವಿಪಕ್ಷಗಳು ಪ್ರಧಾನಿಯವರಿಗೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ, ಜನರ ಮುಂದೆ ಹೊಸ ಮಂತ್ರಿಗಳನ್ನು ಪರಿಚಯಿಸಿಕೊಡಲು ಈ ಯಾತ್ರೆ ಆಯೋಜಿಸಿದ್ದೇವೆ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಇಂದು ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್‌ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ದೇಶವನ್ನು ಆಳಿದ ಮಹಾನ್‌ ಮುತ್ಸದ್ದಿ ವಾಜಪೇಯಿಯವರು ತಮ್ಮ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದೇಶದ ಉದ್ದಗಲಕ್ಕೂ ನಿರ್ಮಿಸಿದಾಗ ಅವರ ಹೆಸರು ಇಟ್ಟುಕೊಂಡಿರಲಿಲ್ಲ. ಕಾಂಗ್ರೆಸ್‌ ಪಕ್ಷ ಕೇವಲ ನೀಚ ರಾಜಕಾರಣ ಮಾಡುವ ಮೂಲಕ ರಾಷ್ಟ್ರದ ನಾಯಕರ ವಿರುದ್ದ ಕೆಟ್ಟದಾಗಿ ಮಾತನಾಡುತ್ತದೆ ಎಂದರು.

ದೇಶ ಸಂಕಷ್ಟದ ಸಮಯದಲ್ಲಿ ಇರುವಾಗಲೂ ವಿರೋಧ ಪಕ್ಷಗಳು ಕ್ಷುಲ್ಲಕ ಕಾರಣ ಇಟ್ಟುಕೊಂಡು ಅಧಿವೇಶನ ನಡೆಸಲು ಅವಕಾಶ ನೀಡಲಿಲ್ಲ. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ವಿರೋಧ ಮಾಡುವುದಕ್ಕಾಗಿಯೇ ವಿರೋಧ ಪಕ್ಷದಲ್ಲಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್‌ ಪಕ್ಷ ಮಾಡಿದರೆ ಬಿಜೆಪಿ ಅಭಿವೃದ್ಧಿಯ ಯೋಜನೆಗಳ ಮೂಲಕ ಜನರ ಬಳಿ ಹೋಗುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ತುಳಸಿ ಮುನಿರಾಜೇಗೌಡ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಶಾಸಕರಾದ ರಘುಪತಿ ಭಟ್‌, ಸುಕುಮಾರ್‌ ಶೆಟ್ಟಿ, ವಿಭಾಗದ ಪ್ರಭಾರಿ ಉದಯ್‌ ಕುಮಾರ್‌ ಶೆಟ್ಟಿ, ನಾಯಕರಾದ ಯಶ್ಪಾಲ್‌ ಸುವರ್ಣ, ಕಿರಣ್‌ ಕೊಡ್ಗಿ, ಗೀತಾಂಜಲಿ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಶಿಲ್ಪಾ ಜಿ ಸುವರ್ಣ, ಸುಮಿತ್ರಾ ನಾಯಕ್‌ ಹಾಗೂ ಇತರರು ಉಪಸ್ಥಿತರಿದ್ದರು.


Spread the love