ಕೃಷ್ಣಾಪುರ ಪರ್ಯಾಯೋತ್ಸವ: ಭಕ್ತಿ ಸಾಗರದಲ್ಲಿ ಮಿಂದೆದ್ದ ಕೃಷ್ಣನೂರು

Spread the love

ಕೃಷ್ಣಾಪುರ ಪರ್ಯಾಯೋತ್ಸವ: ಭಕ್ತಿ ಸಾಗರದಲ್ಲಿ ಮಿಂದೆದ್ದ ಕೃಷ್ಣನೂರು

Pics By Prasanna Kodavoo̧r Team Mangalorean

ಉಡುಪಿ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನೈಟ್ ಕರ್ಫ್ಯೂ ನಡುವೆಯೂ ಕೃಷ್ಣನೂರು ಉಡುಪಿಯಲ್ಲಿ ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಸಹಸ್ರಾರು ಜನರು ಸಾಕ್ಷಿಯಾಗಿದ್ದು, ಇಡೀ ಉಡುಪಿ ನಗರವೇ ಕೃಷ್ಣ ಭಕ್ತಿಯಲ್ಲಿ ತೇಲಾಡಿತು.

ಸೋಮವಾರ ಸಂಜೆ 7 ಗಂಟೆಗೆ ರಥಬೀದಿಯಲ್ಲಿ ನಿರ್ಗಮನ ಪರ್ಯಾಯ ಪೀಠಾಧೀಶರಾದ ಅದಮಾರು‌ ಮಠದ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಎರಡು ವರ್ಷ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿಯ‌ ನಾಗರಿಕ ಪರವಾಗಿ ಸನ್ಮಾನ ಕಾರ್ಯಕ್ರಮ‌ ನಡೆಯಿತು.

ಮಧ್ಯರಾತ್ರಿ ಸರಿಯುತ್ತಿದ್ದಂತೆ ಶ್ರೀ ವಿದ್ಯಾಸಾಗರತೀರ್ಥ ಶ್ರೀಗಳು ಉಡುಪಿಯಿಂದ‌ ಕಾಪು ಸಮೀಪದ ದಂಡತೀರ್ಥಕ್ಕೆ ತೆರಳಿ ಅಲ್ಲಿ‌ ಪವಿತ್ರ ಸ್ನಾನ ಪೂರೈಸಿ ಬಳಿಕ ಜೋಡುಕಟ್ಟೆಗೆ ಆಗಮಿಸಿದರು. ವಿದ್ಯಾಸಾಗರತೀರ್ಥ ಶ್ರೀ ಗಳನ್ನು ಅಷ್ಟಮಠಾಧೀಶರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಬಳಿಕ ಪರ್ಯಾಯೋತ್ಸವದ ಮೆರವಣಿಗೆ ನಡೆಯಿತು.

ಸರಳ ಮೆರವಣಿಗೆ:
ಕೋವಿಡ್ ಹಿನ್ನೆಲೆ ನೈಟ್ ಕರ್ಫ್ಯೂ ವಿಧಿಸಿದ್ದರಿಂದ ವಿಜೃಂಭಣೆಯಿಂದ‌ ನೆರವೇರಬೇಕಿದ್ದ ಪರ್ಯಾಯೋತ್ಸವದ ಮೆರವಣಿಗೆ ಸರಳವಾಗಿ ನಡೆಯಿತು. ಸಾರ್ವಜನಿಕರಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ನಿರಾಕರಿಸಿದ ಹೊರತಾಗಿಯೂ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸುಮಾರು ಒಂದುವರೆ ಕಿಮೀ ಉದ್ದದವರೆಗೂ ರಸ್ತೆ ಬದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿಂತ ಭಕ್ತರು ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಂಡರು. ಪರ್ಯಾಯ ಮೆರವಣಿಗೆಯ ವಿಶೇಷತೆಯೇ ಸ್ತಬ್ಧಚಿತ್ರಗಳು. ಆದರೆ ಈ ಬಾರಿಯ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದ್ದು, ಕೇವಲ ಮಠದಿಂದಲೇ ಬೆರಳೆಣಿಕೆಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದವು.

ವೈಭವದಿಂದ ಸಾಗಿ ಬಂದ ಮೆರವಣಿಗೆ ರಥಬೀದಿ ತಲುಪಿದಾಗ ಸ್ವಾಮೀಜಿಗಳು ಪಲ್ಲಕ್ಕಿಯಿಂದ‌ ಇಳಿದು ರಥಬೀದಿಯಲ್ಲಿ ನಡೆದುಕೊಂಡು ಮುಂದೆ ಸಾಗಿದರು. ಬಳಿಕ‌ ಕೃಷ್ಣ ಮಠಕ್ಕೆ ಆಗಮಿಸಿ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನ ಪಡೆದಿದರು. ಪರ್ಯಾಯ ಮುಗಿಸಿದ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿಯವರಿಂದ ಮಧ್ವಾಚಾರ್ಯರು ಅನುಗ್ರಹಿಸಿದ ಅಕ್ಷಯ ಪಾತ್ರೆಯನ್ನು ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು. ಬಳಿಕ ಪವಿತ್ರ ಸರ್ವಜ್ಞ ಪೀಠಾರೋಹಣಗೈಯ್ಯುವ ಮೂಲಕ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪರ್ಯಾಯ ಆರಂಭಿಸಿದರು.


Spread the love