ಕೃಷ್ಣಾಪುರ ಸ್ವಾಮೀಜಿಗಳ ಪರ್ಯಾಯಕ್ಕೆ ಉಡುಪಿ ಬಿಷಪ್‌ ಶುಭಾಶಯ

Spread the love

ಕೃಷ್ಣಾಪುರ ಸ್ವಾಮೀಜಿಗಳ ಪರ್ಯಾಯಕ್ಕೆ ಉಡುಪಿ ಬಿಷಪ್‌ ಶುಭಾಶಯ

ಉಡುಪಿ: ಹಲವಾರು ವರ್ಷಗಳಿಂದ ಚಾರಿತ್ರಿಕವಾಗಿ ನಡೆದುಕೊಂಡು ಬಂದಿರುವ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯೋತ್ಸವವು ಮತ್ತೊಮ್ಮೆ ಬಂದಿದೆ. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಪರ್ಯಾಯ ಸ್ವಾಮೀಜಿಗಳಾಗಿ ಅಧಿಕಾರ ಸ್ವೀಕಾರ ಮಾಡುವ ಈ ಶುಭ ಸಮಯದಲ್ಲಿ ಅವರಿಗೆ ಶುಭವನ್ನು ಹಾರೈಸುತ್ತೇನೆೆ. ಕೋವಿಡ್ ಸೋಂಕಿನ ಹೊರತಾಗಿಯೂ, ಈ ಪವಿತ್ರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲೆಂದು ಉಡುಪಿ ಕಥೊಲಿಕ್‌ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್‌ ಐಸಾಕ್‌ ಲೋಬೊ ಪ್ರಾರ್ಥಿಸಿದ್ದಾರೆ.

ಪುರಪ್ರವೇಶದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಈ ಬಾರಿ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿದೆ. ಮೈಸೂರು ದಸರಾ ಮಾದರಿಯಲ್ಲಿ, ನಾಡಹಬ್ಬದ ಹಾಗೆ ನಡೆಯುತ್ತಿದ್ದ ಉಡುಪಿ ಪರ್ಯಾಯೋತ್ಸವ, ಈ ಬಾರಿ ಕೋವಿಡ್ ನಿಯಮಗಳಿಂದ ಕಳೆಗುಂದಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿ, ಸರಳವಾಗಿ ಪರ್ಯಾಯೋತ್ಸವವನ್ನು ಆಚರಿಸಲು ನಿರ್ಧರಿಸಿರುವುದು ಪ್ರಶಂಸಾರ್ಹ.

ದೇಶದ ನಾನಾ ಪುಣ್ಯಕ್ಷೇತ್ರಗಳ ಸಂದರ್ಶನ ಪೂರೈಸಿ ಬಂದಿರುವ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಯವರು ಉಡುಪಿ ಮಠದ ಪರ್ಯಾಯ ಸ್ವಾಮೀಜಿಗಳಾಗಿ, ಸರ್ವಧರ್ಮಗಳು ಶಾಂತಿ ಸೌಹಾರ್ದತೆಯಿಂದ ಜೀವಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಮತ-ಧರ್ಮಗಳ ಅನುಯಾಯಿಗಳ ಮಧ್ಯೆ ಹೆಚ್ಚಿನ ಸಹಕಾರ ಬೆಳೆಸಿ, ಜನರ ಅಭಿವೃದ್ಧಿಗಾಗಿ ದುಡಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಕಾಯಕದಲ್ಲಿ ಭಗವಂತ ಅವರ ಜೊತೆಗಿರಲಿ ಎಂದು ಪ್ರಾರ್ಥಿಸುತ್ತಾ, ಉಡುಪಿ ಕ್ರೈಸ್ತ ಸಮುದಾಯದ ಪರವಾಗಿ ಅವರಿಗೆ ಸಕಲ ಒಳಿತನ್ನು ತಮ್ಮ ಸಂದೇಶದಲ್ಲಿ ಕೋರಿದ್ದಾರೆ.


Spread the love