ಕೃಷ್ಣ ಮಠದಲ್ಲಿ ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವಕ್ಕೆ ಪೇಜಾವರ ಶ್ರೀ ಚಾಲನೆ
ಉಡುಪಿ: ಕೃಷ್ಣನಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಿದ. ಕೃಷ್ಣ ಬೋಧಿಸಿದ ಭಗವದ್ಗೀತೆ, ಅದನ್ನನುಸರಿಸಿದರೇ ನಮ್ಮಲ್ಲೂ ಕರ್ತವ್ಯ ಪ್ರಜ್ಞೆ ಮೂಡಿ, ಮತಿ ಹೆಚ್ಚಿ, ಆಪತ್ತು ದೂರವಾಗಿ, ಶ್ರೇಯಸ್ಸನ್ನುಂಟಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಅವರು ಶನಿವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಅವರು ರಥದಲ್ಲಿ ಭಗವದ್ಗೀತೆಯ ಬೃಹತ್ ಪುಸ್ತಕವನ್ನು ಇರಿಸುವ ಮೂಲಕ ಗೀತೋತ್ಸವಕ್ಕೆ ಚಾಲನೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ದೇಶಕ್ಕೊಂದು ಸಂವಿಧಾನ ಇದ್ದಂತೆ, ಭಗವದ್ಗೀತೆ ಸಮಸ್ತ ಆಧ್ಯಾತ್ಮ ಜಗತ್ತಿಗೆ ಸಂವಿಧಾನವಾಗಿದೆ. ಈ ನಿಟ್ಟಿನಲ್ಲಿ ಅದು ಹಿಂದೂಗಳಿಗೆ ಮಾತ್ರವಲ್ಲ, ಸರ್ವರಿಗೂ ಮಾನ್ಯವಾದುದು ಎಂದಭಿಪ್ರಾಯಪಟ್ಟರು.
ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಅಭ್ಯಾಗತರಾಗಿ ಮಣಿಪಾಲ ಮಿಡಿಯಾ ನೆಟ್ವರ್ಕ್ ಅಧ್ಯಕ್ಷ ಟಿ.ಸತೀಶ ಪೈ ಮತ್ತು ತರಂಗ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಉದ್ಯಮಿ ಡಾ.ಕನ್ಯಾನ ಸದಾಶಿವ ಶೆಟ್ಟಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಪಿ. ರಾಘವೇಂದ್ರ, ಅಮೆರಿಕಾದ ಹಾರ್ವಡ್್ರ ವಿವಿಯ ಪ್ರೊ.ಫ್ರಾನ್ಸಿಸ್ ಕ್ಯೂನಿ, ಅಮೆರಿಕಾದ ಸೀಟನ್ ಹಾಲ್ ವಿವಿಯ ಪ್ರೊ. ಆ್ಯಲನ್ ಬ್ರಿಲ್ ಮತ್ತು ಅಮೆರಿಕಾದ ವಿದ್ವಾಂಸ ಕೇಶವ ರಾವ್ ತಾಡಪತ್ರಿ ಅಭ್ಯಾಗತರಾಗಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು. ಗೀತೋತ್ಸವ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿ, ವಿಕ್ರಮ್ ಕುಂಟಾರು ವಂದಿಸಿದರು. ವಿದ್ವಾನ್ ಮಹಿತೋಷ ಆಚಯ್ಯ ನಿರೂಪಿಸಿದರು.
ಈ ಸಂದರ್ಭದಲ್ಲಿ ಯೋಗೀಂದ್ರ ಭಟ್ ವಿರಚಿತ ‘ಕರ್ಸ್ ಆಫ್ ಲೈಟ್ಸ್’ ಮತ್ತು ಮಹೇಶ್ ಕಡವು ವಿರಚಿತ ‘ದೆ ಅರ್ಜುನ ವೇ’ ಎಂಬೆರಡು ಗೀತೆ ಕುರಿತ ಆಂಗ್ಲ ಕೃತಿಗಳ ಅನಾವರಣ ನಡೆಯಿತು. ಸುಗುಣಶ್ರೀ ಭಜನಾ ಮಂಡಳಿಯ ಶಿವಾನಿ ಅವರನ್ನು ಗೌರವಿಸಲಾಯಿತು
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ‘ಶ್ರೀರಾಮಸೇವಾ ಧುರಂಧರ’ ಉಪಾದಿಯೊಂದಿಗೆ ಮುತ್ತಿನ ಕಿರೀಟ ತೊಡಿಸಿ, ರಜತಫಲಕದ ಸನ್ಮಾನಪತ್ರ ಸಹಿತ ವಿಶೇಷವಾಗಿ ಗೌರವಿಸಿದರು.
ಪೇಜಾವರ ಶ್ರೀಗಳು ಕೃಷ್ಣಸೇವೆಯೊಂದಿಗೆ ರಾಮಸೇವೆಯಲ್ಲಿಯೂ ನಿರತರಾಗಿದ್ದಾರೆ. ಆದ್ದರಿಂದಲೇ ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪಾತ್ರ ಗಮನೀಯವಾಗಿತ್ತು ಎಂದು ಪುತ್ತಿಗೆ ಶ್ರೀಗಳು ಹೇಳಿದರು.
ಸನ್ಮಾನ ಸ್ವೀಕರಿಸಿದ ಪೇಜಾವರ ಶ್ರೀಪಾದರು, ಶಿಷ್ಯನಾಗಿ ಗುರುಗಳು ನೀಡಿದ ಗೌರವವನ್ನು ಸ್ವೀಕರಿಸುವುದಾಗಿ ತಿಳಿಸಿ, ಪುತ್ತಿಗೆ ಶ್ರೀಗಳ ಶಿಷ್ಯ ವಾತ್ಸಲ್ಯವನ್ನು ಕೊಂಡಾಡಿದರು.