ಕೃಷ್ಣ ಮಠದ ಬಳಿ ಮುಕ್ತಿಗಾಗಿ ಕಾಯುತ್ತಿದೆ ಕಸದ ರಾಶಿ – ನಗರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

Spread the love

ಕೃಷ್ಣ ಮಠದ ಬಳಿ ಮುಕ್ತಿಗಾಗಿ ಕಾಯುತ್ತಿದೆ ಕಸದ ರಾಶಿ – ನಗರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ದಕ್ಷಿಣ ಭಾರತದಲ್ಲೇ ಹೆಸರು ವಾಸಿಯಾಗಿರುವ ಉಡುಪಿ ಶ್ರೀಕೃಷ್ಣ ಮಠದ ಸುತ್ತ ಒಂದು ಸುತ್ತು ಹಾಕಿದರೆ ಕಸದ ರಾಶಿಗಳೇ ಗೋಚರಿಸುತ್ತದೆ. ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ ಸ್ವಚ್ಛ ಭಾರತ ಅಭಿಯಾನ ಕೈಗೊಂಡು ವರ್ಷಗಳೆ ಕಳೆದರೂ, ಸ್ವಚ್ಛತೆ ಬಗ್ಗೆ ಉಡುಪಿಯವರ ನಿರ್ಲಕ್ಷ್ಯ ನಿಜಕ್ಕೂ ಖೇದಕರ

ಉಡುಪಿ ಶ್ರೀಕೃಷ್ಣ ಮಠಕ್ಕೆ ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಉಡುಪಿ ಕೃಷ್ಣಮಠದ ರಾಜಾಂಗಣದ ಬಳಿ ರಾಶಿ ರಾಶಿ ಕಸವನ್ನು ತಂದು ಸುರಿಯಲಾಗಿದ್ದು ಇದರಿಂದ ಸೊಳ್ಳೆ ಉತ್ಪಾದನೆ ಒಂದು ಕಡೆಯಾದರೆ ಇವುಗಳ ನಡುವೆ ಸಾರ್ವಜನಿಕರು ಎಚ್ಚರ ವಹಿಸಿ, ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ಉಂಟಾಗಿದೆ.

ಕೃಷ್ಣ ಮಠದ ರಾಜಾಂಗಣದ ಬಳಿ ತ್ಯಾಜ್ಯದ ರಾಶಿಯನ್ನು ಹಾಕಲಾಗಿದ್ದು ಇದನ್ನು ತೆಗೆಯದೇ ಇರುವುದರಿಂದ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಕಳೆದ ಹಲವು ತಿಂಗಳಿನಿಂದ ಇಲ್ಲಿ ತ್ಯಾಜ್ಯ ರಾಶಿ ಹಾಕಲಾಗುತ್ತಿದೆ. ಆದ್ರೆ ಯಾವುದೇ ನಿರ್ವಹಣೆ ನಡೆಯುತ್ತಿಲ್ಲ. ಕೃಷ್ಣ ಮಠದ ಆಡಳಿತ ಈ ಬಗ್ಗೆ ಯಾವುದೇ ತಲೆಕೆಡಿಸ್ಕೊಳ್ಳುತ್ತಿಲ್ಲ. ನಗರಸಭೆಯ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು.

ಮಠದ ಒಂದು ಬದಿಯಲ್ಲಿರುವ ರಾಜಾಂಗಣ ಸಭಾಂಗಣ ಆವರಣದಲ್ಲಿ ತ್ಯಾಜ್ಯ ತುಂಬಿದ್ದು ವಿಲೇವಾರಿ ಆಗಿಲ್ಲ.ಬಹಳಷ್ಟು ದಿನಗಳಿಂದ ಕಸ ವೀಲೇವಾರಿ ಆಗದೇ ಇರುವುದರಿಂದ ಯಾತ್ರಾರ್ಥಿಗಳಿಗೂ ಇದು ಕಿರಿಕಿರಿ ನೀಡುತ್ತಿದೆ.ಪ್ಲಾಸ್ಟಿಕ್ ,ಬಾಟಲುಗಳ ಜೊತೆಗೆ ಹಸಿ ತ್ಯಾಜ್ಯ ಕೂಡ ಸೇರಿಕೊಂಡು ಪರಿಸರದ ಅಂದವೂ ಹಾಳಾಗಿದೆ.ಗೀತಾಮಂದಿರ ಪ್ರವೇಶದ್ವಾರದಲ್ಲೇ ಈ ತ್ಯಾಜ್ಯ ರಾಶಿ ಇದ್ದು ಸಾಂಕ್ರಾಮಿಕ ರೋಗಕ್ಕೂ ಆಹ್ವಾನ ನೀಡುತ್ತಿದೆ.ಸ್ಥಳೀಯರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು ತಕ್ಷಣ ಇದನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾದರೆ ಕಸವು ಕೊಳೆತು ಕೆಟ್ಟ ವಾಸನೆ ಬಂದು ಇದರಿಂದ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟರೆ ಯಾವುದೇ ಆಶ್ಚರ್ಯವಿಲ್ಲ. ಪ್ರತೀ ದಿನ ಕಾರ್ಯಕ್ರಮ ನಡೆಯುವ ರಾಜಾಂಗಣದ ಎದುರೇ ಈರೀತಿಯಾಗಿ ತ್ಯಾಜ್ಯದ ರಾಶಿ ಬಿದ್ದಿದ್ದು ಪ್ರವಾಸಿಗರು ಮೂಗು ಮುಚ್ಚಿಕೊಂಡು ಕೃಷ್ಣನ ದರ್ಶನ ಪಡೆಯುವಂತಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಗಿದೆ. ಪ್ರತಿ ದಿನ ಕಸವನ್ನು ಸಂಗ್ರಹಿಸಬೇಕಾದ ನಗರಸಭೆಯ ನಿರ್ಲಕ್ಷ ತೆಯಿಂದ ಸಮಸ್ಯೆ ಉಂಟಾಗಿದೆ. ಇನ್ನಾದರೂ ನಗರಸಭೆ ಇತ್ತ ಗಮನಹರಿಸಿ ಕಸವನ್ನು ತೆರವುಗೊಳಿಸುತ್ತದೆಯೇ ಕಾದು ನೋಡಬೇಕು.


Spread the love

Leave a Reply

Please enter your comment!
Please enter your name here