
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ
ಮೈಸೂರು: ಕಳೆದ ಬಾರಿ ಈ ಹೊತ್ತಿಗೆ ಕೆಆರ್ ಎಸ್ ಜಲಾಶಯದಲ್ಲಿ ಸುಮಾರು ನೂರು ಅಡಿಯಷ್ಟು ನೀರಿತ್ತು. ಆದರೆ ಈ ಬಾರಿ 82.30 ಅಡಿಗೆ ಕುಸಿದಿರುವುದು ಆತಂಕ ತಂದಿದೆ. ಆದರೂ ಮುಂದಿನ ತಿಂಗಳಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆಯಿರುವುದರಿಂದ ತುಸು ನೆಮ್ಮದಿ ತಂದಿದೆ. ಆದರೆ ಹೀಗೆ ನೀರಿನ ಮಟ್ಟದ ಕುಸಿತವಾದರೆ ಬೇಸಿಗೆ ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದ್ದು, ರೈತರು ಆತಂಕ ಪಡುವಂತಾಗಿದೆ.
ಕಳೆದ ಕೆಲವು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದರಿಂದ ಜಲಾಶಯದಲ್ಲಿ ನೀರಿನ ಮಟ್ಟ ನೂರಡಿ ಆಸುಪಾಸಿನಲ್ಲಿರುತ್ತಿತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ವರುಣ ಕೈಕೊಟ್ಟ ಕಾರಣ ಕಾವೇರಿ ನದಿಯಲ್ಲಿ ನೀರು ಬತ್ತುತ್ತಿದ್ದು ಪರಿಣಾಮ ಗರಿಷ್ಠ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಸದ್ಯ 438 ಕ್ಯುಸೆಕ್ ಒಳಹರಿವಿದ್ದು, ನದಿ ಮತ್ತು ನಾಲೆಗಳಿಗೆ ಒಟ್ಟು 3,712 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 103.8 ಅಡಿ ನೀರಿತ್ತು. 12,488 ಕ್ಯುಸೆಕ್ ಒಳ ಹರಿವು ಮತ್ತು 2,417 ಕ್ಯುಸೆಕ್ ಹೊರ ಹರಿವು ದಾಖಲಾಗಿತ್ತು.
ಮುಂದಿನ ದಿನಗಳಲ್ಲಿ ನೀರಿನ ಮಟ್ಟ 74 ಅಡಿಗೆ ಕುಸಿದರೆ, ಆ ಬಳಿಕ ಕುಡಿಯುವ ಉದ್ದೇಶಕ್ಕಷ್ಟೇ ನೀರನ್ನು ಬಳಸಲಾಗುತ್ತದೆ. ಕೃಷಿ ಉದ್ದೇಶಕ್ಕೆ ನೀರು ದೊರೆಯುವುದಿಲ್ಲ. ಮಳೆಯ ಕೊರತೆಯಿಂದಾಗಿ ದಿನೇ ದಿನೇ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಕಾರಣ ಮುಂದಿನ ಬೆಳೆಗೆ ನೀರು ದೊರೆಯುವುದೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಮಳೆ ಬಿದ್ದು ಜಲಾಶಯ ತುಂಬಿದರಷ್ಟೇ ಬೆಳೆಗೆ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಹಾಗೆನೋಡಿದರೆ ವರುಣನ ಕೃಷೆಯಿಂದಾಗಿ ಕಳೆದ ಆರು ವರ್ಷಗಳಿಂದ ಕೆಆರ್ ಎಸ್ ಜಲಾಶಯ ಭರ್ತಿಯಾಗುತ್ತಿದ್ದು, ನೀರಿನ ಬವಣೆ ಕಡಿಮೆಯಾಗಿದೆ. 2017ರ ತನಕವೂ ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಕುಸಿದಿತ್ತು, ಕೆಲವು ವರ್ಷಗಳ ಕಾಲ ಮುಂಗಾರು ಕೈಕೊಟ್ಟ ಕಾರಣ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ 2016ರಲ್ಲಿ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್ ತಲುಪಿತ್ತು. ಆದರೆ 2017ರಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರು ಮಳೆ ಕೈಹಿಡಿದಿತ್ತು. ಪರಿಣಾಮ ಒಂದಷ್ಟು ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಆದರೆ ಜಲಾಶಯ ಭರ್ತಿಯಾಗಿರಲಿಲ್ಲ.
2018ರಲ್ಲಿ ಸುರಿದ ಕುಂಭದ್ರೋಣ ಮಳೆ ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಪ್ರವಾಹ ಸೃಷ್ಟಿಸಿದ್ದಲ್ಲದೆ, ಭೂಕುಸಿತಕ್ಕೂ ಕಾರಣವಾಗಿತ್ತು. ಆದರೆ ಕಾವೇರಿ ತುಂಬಿ ಹರಿದ ಪರಿಣಾಮ ಜಲಾಶಯ ಭರ್ತಿಯಾಗುವುದರೊಂದಿಗೆ ಲಕ್ಷಾಂತರ ಕ್ಯುಸೆಕ್ ಹೆಚ್ಚುವರಿ ನೀರನ್ನು ಹೊರ ಬಿಡಲಾಯಿತು. ಅದಾದ ನಂತರ ಪ್ರತಿ ವರ್ಷವೂ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗುತ್ತಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಜಲಾಶಯ ಭರ್ತಿಯಾಗಿತ್ತು. ಆದಾದ ನಂತರ ಡಿಸೆಂಬರ್ ತನಕವೂ ಹಿಂಗಾರು ಮಳೆ ಸುರಿದ ಕಾರಣ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ. ಇದರ ಪರಿಣಾಮ ಈ ಬಾರಿ 82.30ಅಡಿಗೆ ತೃಪ್ತಿ ಪಡುವಂತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೂ ಕೆಆರ್ ಎಸ್ ನೀರನ್ನು ನಂಬಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದು ಎಂಬ ನೆಮ್ಮದಿಯಿದೆ.