ಕೆಆರ್ ಎಸ್ ಬೃಂದಾವನ ವ್ಯಾಪ್ತಿಯಲ್ಲಿ ಆತಂಕ ತಂದ ಚಿರತೆ

Spread the love

ಕೆಆರ್ ಎಸ್ ಬೃಂದಾವನ ವ್ಯಾಪ್ತಿಯಲ್ಲಿ ಆತಂಕ ತಂದ ಚಿರತೆ

ಮೈಸೂರು: ಪ್ರಮುಖ ಪ್ರವಾಸಿ ತಾಣ ಕೆ.ಆರ್.ಎಸ್. ಬೃಂದಾವನ ಗಾರ್ಡನ್ ನಲ್ಲಿ ಚಿರತೆಯೊಂದು ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸಿದೆ. ಆದರೆ ಅರಣ್ಯಾಧಿಕಾರಿಗಳು ಮಾತ್ರ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿನಿತ್ಯ ಕೆ.ಆರ್.ಎಸ್ ಜಲಾಶಯವನ್ನು ವೀಕ್ಷಿಸುವ ಸಲುವಾಗಿ ಸಾವಿರಾರು ಜನ ಆಗಮಿಸುತ್ತಾರೆ. ಅದರಲ್ಲೂ ವೀಕೆಂಡ್ ನಲ್ಲಿ ಪ್ರವಾಸಿಗರು ದಂಡು ತುಸು ಜಾಸ್ತಿಯೇ ಇರಲಿದೆ. ಇದೀಗ ದೀಪಾವಳಿ ಹಬ್ಬವೂ ಬಂದಿರುವುದರಿಂದ ಸಾಲು ಸಾಲು ರಜೆಗಳಿದ್ದು ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಾಗಲಿದೆ.

ಈ ನಡುವೆ ಬೃಂದಾವನಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಬೆಚ್ಚಿಬೀಳುವಂತೆ ಮಾಡುವ ಸುದ್ದಿ ಬೆಳಕಿಗೆ ಬಂದಿದೆ. ಬೃಂದಾವನ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿರುವುದು ಆತಂಕ ಪಡುವಂತೆ ಮಾಡಿದೆ. ಈ ನಡುವೆ ಚಿರತೆ ಕಾಣಿಸಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದೀಗ ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇರಿಸಲಾಗಿದ್ದು, ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜತೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಕಾವೇರಿ ನೀರಾವರಿ ನಿಗಮದ ಫಾರೂಕ್ ಅಬು ಹಾಗೂ ಅರಣ್ಯಾಧಿಕಾರಿಗಳಾದ ಅನಿತ, ಶಿವ.ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಪ್ರವಾಸಿಗರಾಗಲೀ ಸ್ಥಳೀಯರಾಗಲೀ ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬೃಂದಾವನದ ಬಳಿ ಕಾಣಿಸಿಕೊಂಡ ಚಿರತೆ ಸುತ್ತಮುತ್ತ ಇದೆಯಾ ಅಥವಾ ಬೇರೆ ಕಡೆಗೆ ತೆರಳಿದೆಯಾ ಎಂಬುದರ ಬಗ್ಗೆ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಬೋನು ಇರಿಸಿದ್ದರಿಂದ ಚಿರತೆ ಬೋನಿಗೆ ಬೀಳುತ್ತಾ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಕಾಯುತ್ತಿದ್ದಾರೆ.


Spread the love