ಕೆಆರ್ ಎಸ್ ಹಿನ್ನೀರಿನಲ್ಲಿ ಸಿಕ್ತು ರಾಶಿಗಟ್ಟಲೆ ಮದ್ಯದ ಬಾಟಲಿಗಳು

Spread the love

ಕೆಆರ್ ಎಸ್ ಹಿನ್ನೀರಿನಲ್ಲಿ ಸಿಕ್ತು ರಾಶಿಗಟ್ಟಲೆ ಮದ್ಯದ ಬಾಟಲಿಗಳು

ಮೈಸೂರು: ಮಂಡ್ಯದ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರ ಪ್ರದೇಶ ಸುಂದರ ಪ್ರವಾಸಿ ತಾಣವಾಗಿದ್ದು, ಪ್ರತಿದಿನವೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರ ಪೈಕಿ ಮೋಜು ಮಸ್ತಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಸಾಕ್ಷಿ ಇಲ್ಲಿ ರಾಶಿ ಬಿದ್ದಿರುವ ಮದ್ಯದ ಬಾಟಲಿಗಳಾಗಿವೆ.

ಕೆಆರ್ ಎಸ್ ಹಿನ್ನೀರು ಪ್ರದೇಶದ ಆನಂದೂರು ಗ್ರಾಮದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಸೇರಿ ಮಾಡಿರುವ ಸ್ವಚ್ಚತಾ ಕಾರ್ಯ ಮಾಡಿದ್ದು ಈ ವೇಳೆ ಕಸಕ್ಕಿಂತ ಹೆಚ್ಚಾಗಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ದೊರೆತಿರುವುದು ಮೋಜು ಮಸ್ತಿಗೆ ಆನಂದೂರು ಆಶ್ರಯ ತಾಣ ಎಂಬುದಕ್ಕೆ ಸಾಕ್ಷಿಯಾಗಿದೆ.

ಹಿನ್ನೀರಿನ ದಂಡೆಯಲ್ಲಿ ಇಷ್ಟೊಂದು ಬಾಟಲಿ ಮತ್ತು ಕಸದ ರಾಶಿ ಬಿದ್ದಿರುವಾಗ ನೀರಿನೊಳಗೆ ಇನ್ನೆಷ್ಟಿದೆಯೋ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಈಗಾಗಲೇ ಮಳೆಗಾಲದಲ್ಲಿ ಬಹಳಷ್ಟು ಕಸಗಳು ಕೊಚ್ಚಿ ಹೋಗಿದ್ದರೂ ಬಾಟಲಿಗಳು ಜಲಾಶಯವನ್ನು ಸೇರುತ್ತಿವೆ. ದೂರದಿಂದ ಮೋಜು ಮಸ್ತಿಗೆ ಬರುವ ಕೆಲವರು ಮದ್ಯದ ಬಾಟಲಿಯೊಂದಿಗೆ ಬರುತ್ತಿದ್ದು, ಮದ್ಯ ಸೇವನೆ ಮಾಡಿದ ಬಳಿಕ ಬಾಟಲಿಯನ್ನು ಎಸೆದು ಹೋಗುತ್ತಿದ್ದಾರೆ. ಪರಿಣಾಮ ರಾಶಿ ಗಟ್ಟಲೆ ಬಾಟಲಿ ಸಿಗುವಂತಾಗಿದೆ.

ಇದರ ಜತೆಗೆ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕವರ್ ಸೇರಿದಂತೆ ಕಸಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


Spread the love