ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಮೂವರು ಆರೋಪಿಗಳ ಸೆರೆ

Spread the love

ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಮೂವರು ಆರೋಪಿಗಳ ಸೆರೆ
 

ಮಂಗಳೂರು: ಸರಕಾರಿ ಸಂಸ್ಥೆಯಾದ ಕೆಎಂಎಫ್ ಡೈರಿ (KMF Dairy) ಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ 1.84 ಕೋ.ರೂ.ಗೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಲ್ಲಿ ಮಹಿಳೆ ಸಹಿತ ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಪುತ್ತೂರು ತಾಲೂಕಿನ ಬಳ್ನಾಡು ಗ್ರಾಮದ ರಮೇಶ್ ಪೂಜಾರಿ ಬಿ.(41), ಮಂಗಳೂರಿನ ಅಳಪೆ ಪಡೀಲ್‌ನ ಚಂದ್ರಾವತಿ (36), ಬೆಂಗಳೂರಿನ ಸುರೇಂದ್ರ ರೆಡ್ಡಿ ಜಿ.(36) ಬಂಧಿತ ಆರೋಪಿಗಳಾಗಿದ್ದಾರೆ.

ಈಗಾಗಲೆ ಮೂಲತಃ ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಪ್ರಸ್ತುತ ಮೂಡುಬಿದಿರೆ ತಾಲೂಕಿನ ಮಾಸ್ತಿಕಟ್ಟೆಯ ವಿವೇಕ ನಗರ ನಿವಾಸಿ ರಾಮ ಪ್ರಸಾದ್ ರಾವ್ ಪಿ. (37) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದರೊಂದಿಗೆ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಕ್ರಮ ಜರಗಿಸಲಾಗಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಮಂಗಳವಾರ ಬಂಧಿಸಲ್ಪಟ್ಟ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನವಾಗಿದೆ.

ಪ್ರಮುಖ ಆರೋಪಿ ರಾಮ್ ಪ್ರಸಾದ್ ರಾವ್ ಎಂಬಾತನು ಹರೀಶ್, ಕೇಶವ, ಶಶಿಧರ ಇತ್ಯಾದಿ ಹೆಸರಿನಲ್ಲೂ ಗುರುತಿಸಿಕೊಂಡು ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಎಂದು ಫರಂಗಿಪೇಟೆ ಸಮೀಪದ ವಳಚ್ಚಿಲ್ ಪದವಿನ ದೇವಿಪ್ರಸಾದ್ ಮತ್ತಿತರರು ಆ.18ರಂದು ದೂರು ನೀಡಿದ್ದರು. ಅದರಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love