ಕೆಟ್ಟು ಹೋದ ಸೋಲಾರ್ : ಕಗ್ಗತ್ತಲಲ್ಲಿ ಗ್ರಾಮಸ್ಥರು

Spread the love

ಕೆಟ್ಟು ಹೋದ ಸೋಲಾರ್ : ಕಗ್ಗತ್ತಲಲ್ಲಿ ಗ್ರಾಮಸ್ಥರು

ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಪಂಗೆ ಸೇರುವ ತೋಳಸಿಕೆರೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲದ ಕಾರಣದಿಂದ ಸೋಲಾರ್ ಮೂಲಕ ವಿದ್ಯುತ್ ಒದಗಿಸಲಾಗಿತ್ತಾದರೂ ಕಳೆದ ಒಂದು ವಾರದಿಂದ ಸೋಲಾರ್  ಕೆಟ್ಟಿರುವುದರಿಂದ ಬೆಳಕಿಲ್ಲದೆ ಗ್ರಾಮಸ್ಥರು ಕಗ್ಗತ್ತಲ್ಲಿ ಜೀವನ ಕಳೆಯುವಂತಾಗಿದೆ.

ತೋಳಸಿಕೆರೆ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಇರುವುದರಿಂದ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅಡಿ ಡಿಡಿಜಿ ಕಾರ್ಯಕ್ರಮದಡಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು ವತಿಯಿಂದ ಮುಂಬೈನ ನವ್ಯ ಟೆಕ್ನಾಲಜಿ ಸಂಸ್ಥೆಯ ಮೂಲಕ ಅ.31, 2018 ರಂದು ಗ್ರಾಮದ 180 ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ   ಎರಡು ಕೋಟಿ 28 ಲಕ್ಷದ 48ಸಾವಿರ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿತ್ತು.

ಆದರೆ ಕಳೆದ ಒಂದು ವಾರದಿಂದ ಸೋಲಾರ್ ಪ್ಲಾಂಟ್ ಕೆಟ್ಟಿರುವುದರಿಂದ ಕಗ್ಗತ್ತಲಿನಲ್ಲಿ ಜೀವನ ಕಳೆಯುವಂತಹ ಪರಿಸ್ಥಿತಿ ಬಂದಿದ್ದು ಇದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಏಜೆನ್ಸಿಯವರು ತಕ್ಷಣ ಸೂಕ್ತ ಕ್ರಮ ಕೈಗೊಂಡು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾಪಂ ಪಿಡಿಓ ಕಿರಣ್ ಅವರು ತೋಳಸಿಕೆರೆ ಗ್ರಾಮದಲ್ಲಿ ಸೋಲಾರ್ ದುರಸ್ತಿಯಾಗಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದು ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ.


Spread the love