
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕ್ರಮ : ಸಿಎಂ ಬೊಮ್ಮಾಯಿ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹಂತ ಹಂತವಾಗಿ ನೀರು ತುಂಬಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಇಡೀ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆರೆಗಳ ತುಂಬಿಸುವ ಸಮಗ್ರ ಅಭಿವೃದ್ದಿ ಯೋಜನೆಗೆ ಎರಡು ಪ್ರಸ್ತಾವನೆಗಳು ಮುಂದಿದೆ. 754 ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ ಅನುಮೋದನೆಗೆ ಕಳುಹಿಸಲಾಗಿದೆ. ಸಾವಿರ ಕೋಟಿ ರೂ.ವೆಚ್ಚದ ಯೋಜನೆಗೆ ವಿಸೃತ ಯೋಜನಾ ವರದಿ ಸಲ್ಲಿಕೆಯಾಗಬೇಕಿದೆ. ಒಟ್ಟಾರೆ ಇಡೀ ಚಾಮರಾಜನಗರ ಜಿಲ್ಲೆಯ ಎಲ್ಲ ಭಾಗದ ಕೆರೆಗಳನ್ನು ಹಂತ ಹಂತವಾಗಿ ತುಂಬಿಸಲು ಅಗತ್ಯವಿರುವ ಯೋಜನೆಯನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಳವಾಗಲಿದೆ. ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರಿನ ಪೂರೈಕೆಗೂ ಅನುಕೂಲವಾಗಲಿದೆ. ಆರೋಗ್ಯಕರ ಜನವಸತಿಗಳಿಗೆ ಉಪಯೋಗವಾಗಲಿದೆ. ಹೀಗಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾಗಲಿದ್ದೇವೆ ಎಂದರು.
ಚಾಮರಾಜನಗರ ಜಿಲ್ಲೆಯನ್ನು ಕೈಗಾರಿಕೆ ಜಿಲ್ಲೆಯಾಗಿ ಪರಿವರ್ತಿಸಲು ಸಾಧ್ಯವಿದೆ. ಕೈಗಾರಿಕಾ ವಸಾಹತು ಟೌನ್ಶಿಪ್ ನಿರ್ಮಾಣ ಮಾಡಬಹುದು. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ತೆರೆಯಬಹುದು. ಇದರಿಂದ ಯುವ ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಗೆ 102 ಕೋಟಿ ರೂ. ಮಂಜೂರು ಮಾಡಲಾಗಿದೆ. ಶಿಕ್ಷಣ, ಆರೋಗ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೌಷ್ಠಿಕತೆಯಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದೇವೆ. ಜಿಲ್ಲೆಯ ಆರ್ಥಿಕ ಔದ್ಯೋಗಿಕ ಸಾಮಾಜಿಕ, ಶಿಕ್ಷಣ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ. ಅಭಿವೃದ್ದಿಯ ವಿಷಯದಲ್ಲಿ ಪಕ್ಷ ಬೇಧ ಇಲ್ಲ ಎಂದರು.
ಚಾಮರಾಜನಗರ ಜಿಲ್ಲೆಗೆ ವಿಶ್ವ ವಿದ್ಯಾಲಯ ಮಂಜೂರು ಮಾಡಲಾಗಿದೆ. ಮಾದರಿ ವಿಶ್ವವಿದ್ಯಾಲಯವನ್ನಾಗಿಸಲು ಕ್ರಮ ವಹಿಸಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲೆಯ ಇತರ ಭಾಗಗಳಲ್ಲಿಯೂ ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದರು.
ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮಾತನಾಡಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು 1390 ಕೋಟಿ ರೂ. ವೆಚ್ಚದ ಯೋಜನೆ ಸಿದ್ದವಾಗಿದೆ. ಜಿಲ್ಲೆಗೆ 25 ವರ್ಷಗಳು ತುಂಬಿದ್ದು ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಇಂದು ಒಂದು ಸಾವಿರಕ್ಕೂ ಹೆಚ್ಚು ಕೋಟಿ ರೂ. ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದರು.
ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಿದೆ. ಈಗಾಗಲೇ ವಿಶ್ವ ವಿದ್ಯಾಲಯ ಮಂಜೂರಾಗಿದ್ದು ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ. ಜಿಲ್ಲೆಗೆ ಕಾನೂನು ಕಾಲೇಜು ಸಹ ಬರಬೇಕಿದೆ. ಈ ಸಂಬಂಧ ಉಪಕುಲಪತಿ ಅವರ ಜೊತೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ದಿಯಾಗಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿಯವರು ವಿಶೇಷಚೇತನರಿಗೆ ತ್ರಿಚಕ್ರ ವಾಹನ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ವಹಿಸಿದ್ದರು. ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ಕುಮಾರ್, ಕಂದಾಯ ಸಚಿವ ಆರ್. ಅಶೋಕ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಸದಸ್ಯರಾದ ಚಂದ್ರಶೇಖರ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಪಂ ಸಿಇಓ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿಪಿ. ಶಿವಕುಮಾರ್ ಉಪಸ್ಥಿತರಿದ್ದರು