ಕೆರೆಯಲ್ಲಿ ಸಿಕ್ಕಿದ ಹುಲಿ ಕಳೇಬರದ ಸುತ್ತ ಅನುಮಾನ!

Spread the love

ಕೆರೆಯಲ್ಲಿ ಸಿಕ್ಕಿದ ಹುಲಿ ಕಳೇಬರದ ಸುತ್ತ ಅನುಮಾನ!

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರ ವಲಯ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರದ ಕೆರೆಯಲ್ಲಿ ಸಿಕ್ಕ ಹುಲಿ ಕಳೇಬರದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಕಾಡುಪ್ರಾಣಿಗಳು ತೀರಾ ದಣಿದು ನೀರು ಕುಡಿದಾಗ ಹೃದಯಾಘಾತದಿಂದ ಮೃತಪಡುತ್ತವೆ. ಮೇಲ್ನೋಟಕ್ಕೆ ಇದೇ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಬುಧವಾರ ಹುಲಿ ಕಳೇಬರವನ್ನು ಮೇಲಕ್ಕೆತ್ತಿದಾಗ ಅದರ ಕೊರಳು ಮತ್ತು ಕಾಲುಗಳಲ್ಲಿ ತಂತಿ ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಹುಲಿಯನ್ನು ಕೊಲ್ಲಲಾಗಿದೆ ಎಂಬ ಅನುಮಾನ ಮೂಡಿಸಿದೆ. ಅಲ್ಲದೆ, ಹುಲಿಯ ಕಾಲಿಗೆ ತಂತಿಯಿಂದ ಕಲ್ಲು ಕಟ್ಟಿ ಕೆರೆಗೆ ಎಸೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ.

ಬೇರೆ ಸ್ಥಳದಲ್ಲಿ ಮೃತಪಟ್ಟಿರುವ ಹುಲಿಯನ್ನು ಕೆರೆಗೆ ತಂದು ಬಿಸಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉರುಳಿನಿಂದ ಮೃತಪಟ್ಟಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ದೃಢಪಡಿಸಿದ್ದು ಇನ್ಯಾವ ರೀತಿಯಲ್ಲಿ ಹುಲಿಯನ್ನು ಕೊಂದಿರಬಹುದು ಎಂಬ ಜಿಜ್ಞಾಸೆ ಅಧಿಕಾರಿಗಳದ್ದಾಗಿದೆ.

ಇತ್ತೀಚೆಗೆ ಕೆಬ್ಬೇಪುರದ ಸುತ್ತಮುತ್ತ ಹುಲಿ ಕಾಟ ಹೆಚ್ಚಾಗಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಹುಲಿ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಕ್ರಮವನ್ನು ಅಧಿಕಾರಿಗಳು ತೆಗೆದುಕೊಂಡಿಲ್ಲ ಎಂದು ಜನರು ಆಕ್ರೋಶಗೊಂಡಿದ್ದರು. ಈಗ ಹುಲಿ ಸತ್ತಿರುವುದರಿಂದ ಉಪಟಳ ತಪ್ಪಿಸಲು ಯಾರಾದರೂ ಕೊಂದಿದ್ದಾರಾ ಎಂಬ ಅನುಮಾನ ಮೂಡಿದೆ.

ಎರಡು-ಮೂರು ದಿನಗಳಿಂದ ಕೆರೆ ನೀರಿನಲ್ಲಿ ದೇಹ ಕೊಳೆತಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರವಾದ ಕಾರಣ ಕಂಡು ಹಿಡಿಯಲು ಆಗಿಲ್ಲ. ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ವನ್ಯಪ್ರಾಣಿ ವೈದ್ಯ ವಾಸೀಂ ಮಿರ್ಜಾ ತಿಳಿಸಿದ್ದಾರೆ. ಹುಲಿ ಸಾವಿನ ಬಗ್ಗೆ ಖಚಿತ ಮಾಹಿತಿ ಪಡೆಯಲು ಮತ್ತು ಆರೋಪಿಗಳ ಬಂಧನಕ್ಕಾಗಿ ತಂಡವನ್ನು ರಚಿಸಲಾಗುವುದು. ಮೃತಪಟ್ಟಿರುವ ಹುಲಿ ಗಂಡಾಗಿದ್ದು, 5 ವರ್ಷವಿರಬಹುದು ಎಂದು ಅಂದಾಜು ಮಾಡಲಾಗಿದೆ. ಸಣ್ಣ ವಯಸ್ಸಿನ ಹುಲಿಯಾದ್ದರಿಂದ ಸಹಜ ಸಾವು ಎಂದು ಹೇಳಲಾಗದು. ಮರಣೋತ್ತರ ಪರೀಕ್ಷೆ ಬಳಿಕ ಎನ್ಟಿಸಿಎ ನಿರ್ದೇಶನದಂತೆ ಕಳೇಬರ ಸುಡಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಹಸುಗಳಿಗೆ ನೀರು ಕುಡಿಸಲು ರೈತನೊಬ್ಬ ಕೆರೆ ಬಳಿಗೆ ಹೋಗಿದ್ದಾಗ ಹುಲಿ ಕಳೇಬರ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಹುಲಿ ನೀರು ಕುಡಿಯುವಾಗ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕಾಲಿನಲ್ಲಿ ತಂತಿ ಸಿಕ್ಕಿರುವುದು ಅನುಮಾನ ಮೂಡಿಸಿದ್ದು, ಪ್ರಕರಣದ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ.


Spread the love