ಕೆರೆ ಒತ್ತುವರಿ: ಅಧಿಕಾರಿಗಳ ವಿರುದ್ಧವೇ ಕೇಸು – ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಎಚ್ಚರಿಕೆ
ಮಂಗಳೂರು: ಜಿಲ್ಲೆಯಲ್ಲಿರುವ ವಿವಿಧ ಕೆರೆಗಳ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ನಿರಂತರ ಗಸ್ತು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾ ಮಟ್ಟದ ಕೆರೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಕೆರೆಗಳಿವೆ. ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೆರೆಗಳಿವೆ. ಸಂಬಂಧಿಸಿದ ಇಲಾಖೆಗಳು ಕೆರೆಗಳ ಸಂಪೂರ್ಣ ವ್ಯಾಪ್ತಿಯನ್ನು ಆಗ್ಗಿಂದಾಗೆ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ ರಾಜು ಮಾತನಾಡಿ, ಕೆರೆ ಜಮೀನು ಒತ್ತುವರಿಯಾಗದಂತೆ ಆಗ್ಗಿಂದಾಗೆ ಗಸ್ತು ನಿರ್ವಹಿಸಬೇಕು. ಯಾವುದೇ ಕೆರೆ ಒತ್ತುವರಿ ಆಗಿರುವುದು ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಒತ್ತುವರಿಯಾಗಿರುವ ಕೆರೆ ಜಮೀನನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
