
ಕೆಲವೊಂದು ಪಕ್ಷಗಳಲ್ಲಿ ರೌಡಿಗಳೇ ಮುಖ್ಯಸ್ಥರಾಗಿದ್ದರೂ ಅವರ ಬಗ್ಗೆ ಏನೂ ಮಾತನಾಡುವುದಿಲ್ಲ – ಸಚಿವ ಕೋಟ
ಕುಂದಾಪುರ: ಇದೀಗ ಮುಗಿದಿರುವ ಚುನಾವಣಾ ಫಲಿತಾಂಶ ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ. ಪ್ರತಿಪಕ್ಷಗಳು ಏನೇ ಆರೋಪ ಮಾಡಿದರೂ ನಮ್ಮ ಸರ್ಕಾರ ಮಾಡಿರುವ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ಗಮನಿಸಿದ್ದಾರೆ. ದೇಶಾದ್ಯಂತ ಬಿಜೆಪಿ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರೌಡಿ ಪಟ್ಟಿಯಲ್ಲಿ ಇರುವವರು ನಮ್ಮ ಪಕ್ಷಕ್ಕೆ ಸೇರಲು ಆಸಕ್ತರಾಗಿದ್ದಾರೆ ಎಂದು ತಿಳಿದ ಕೂಡಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅದಕ್ಕೆ ತಡೆ ನೀಡಿದ್ದಾರೆ. ವಿಪರ್ಯಾಸವೆಂದರೆ ಬೇರೆ ಪಕ್ಷಗಳಲ್ಲಿ ರೌಡಿಗಳೇ ಮುಖ್ಯಸ್ಥರಾಗಿದ್ದರೂ ನಾವು ಅವರ ಕುರಿತು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.
ಹಿಂದುಳಿದ ವರ್ಗದವರಿಗೆ ವಿದ್ಯಾರ್ಥಿವೇತನದಲ್ಲಿ ಶುಲ್ಕ ಮರುಪಾವತಿ ಇದ್ದು ಕೊರೊನಾದ ಬಳಿಕ ಅದಕ್ಕೆ ತಡೆಯಾಗಿಲ್ಲ. ಮೆಟ್ರಿಕ್ ಪೂರ್ವದ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ ಎನ್ನುವ ಕಾರಣಕ್ಕಾಗಿ ವಿಶೇಷ ಸಭೆ ನಡೆಸಲಾಗಿದೆ. ಬಿಸಿಎಂ ಹಾಸ್ಟೆಲ್ನ ಬೆಡ್ಶೀಟ್, ಮಂಚಗಳ ಕೊರತೆ ನೀಗಲು ಮುಖ್ಯಮಂತ್ರಿಗಳು 100 ಕೋ.ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. 26 ಕೋ.ರೂ ಅನುದಾನದಲ್ಲಿ ಹಾಸಿಗೆ ಖರೀದಿಗೆ, 10 ಕೋ.ರೂ.ಗಳ ಮಂಚ ಖರೀದಿಗೆ, 2,400 ಹಾಸ್ಟೆಲ್ಗಳ ಪೈಕಿ 500 ಹಾಸ್ಟೆಲ್ ದುರಸ್ತಿಗೆ 150 ಕೋ.ರೂ. ಒಪ್ಪಿಗೆ ನೀಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೆಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಬಿಜೆಪಿ ಮುಖಂಡ ಗೋಪಾಲ ಕಳಂಜಿ, ಸುರೇಂದ್ರ, ಅರುಣ್ ಬಾಣ, ಶಿವಕುಮಾರ್ ಇದ್ದರು.