ಕೆಳಮಟ್ಟದ ರಾಜಕಾರಣ ಯಾರೂ ಮಾಡಬಾರದು: ಸಿಎಂ ಕಾರ್ಯಕ್ರಮದ ಕುರಿತು ಪೂಜಾರಿ ಬೇಸರ

Spread the love

ಕೆಳಮಟ್ಟದ ರಾಜಕಾರಣ ಯಾರೂ ಮಾಡಬಾರದು: ಸಿಎಂ ಕಾರ್ಯಕ್ರಮದ ಕುರಿತು ಪೂಜಾರಿ ಬೇಸರ

ಕುಂದಾಪುರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಿದ ಕೆಲವು ಯೋಜನೆಗಳನ್ನು ಇಂದು ಮುಖ್ಯಮಂತ್ರಿಗಳ ಮೂಲಕ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಜನತೆಗೆ ತಪ್ಪು ಮಾಹಿತಿ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಇಂತಹ ಕೆಳಮಟ್ಟದ ರಾಜಕಾರಣ ಹಿಂದೆ ಯಾವೊಬ್ಬ ಜನಪ್ರತಿನಿಧಿಯೂ ಮಾಡಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಬೇಸರ ವ್ಯಕ್ತಪಡಿಸಿದರು.

ಅವರು ಸೋಮವಾರ ಮಧ್ಯಾಹ್ನ ನಗರದ ಖಾಸಗಿ ಹೋಟೇಲ್‍ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸೌಡ ಸೇತುವೆ, ಹಳ್ಳಿಹೊಳೆಯ ಕಬ್ಬಿನಾಲೆ ಸೇತುವೆ, ಎಲ್ಲೂರು ಮೆಸ್ಕಾಂ ಉಪವಿಭಾಗ ನನ್ನ ಅವಧಿಯಲ್ಲಿ ಮಂಜೂರಾಗಿ ಶಿಲಾನ್ಯಾಸ ನಡೆದಿದ್ದರೂ ಈಗ ಮರು ಶಿಲಾನ್ಯಾಸ ನಡೆಯುತ್ತಿದೆ. ಈಗಾಗಲೇ ಎಲ್ಲೂರು ಸಬ್ ಸ್ಟೇಶನ್ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯೂ ಇತ್ತೀಚೆಗಷ್ಟೇ ನಡೆದಿದೆಮ ನನ್ನ ಶ್ರಮದಲ್ಲಾದ ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸೌಜನ್ಯಕ್ಕೂ ಆಹ್ವಾನಿಸಿಲ್ಲ. ನಾನು ತಂದ ಯೋಜನೆಗಳಿಗೆ ಇಂದು ಮುಖ್ಯಂತ್ರಿಗಳ ಮುಖೇನ ಚಾಲನೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಪೂಜಾರಿ ಹೇಳಿದರು.

ಕೊಡೇರಿ ಬಂದರಿಗೆ ಲಕ್ಷ್ಮೀನಾರಾಯಣರ ಅವಧಿಯಲ್ಲಿ 30 ಕೋ.ರೂ. ಕಾಮಗಾರಿ ಮುಗಿದು, ನನ್ನ ಅವಧಿಯಲ್ಲಿ 33 ಕೋ.ರೂ. ಮಂಜೂರಾಗಿದೆ. ಈಗ 63 ಕೋ.ರೂ. ಕಾಮಗಾರಿ ಉದ್ಘಾಟನೆ ಎಂದು ಪ್ರಕಟಿಸಿ ಶಾಸಕರು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಜನರಿಗೆ ಸರಕಾರ ಹಾಗೂ ಬಿಜೆಪಿ ತಪ್ಪು ಮಾಹಿತಿ ನೀಡುತ್ತಿದೆ. ಮೀನುಗಾರರಿಗೆ ಸೀಮೆಣ್ಣೆ ಪ್ರತಿ ತಿಂಗಳು ಬರುತ್ತಿದ್ದುದು ಈಗ 4 ತಿಂಗಳಿಂದ ಬಂದಿಲ್ಲ. ಗಂಗೊಳ್ಳಿ ಜೆಟ್ಟಿ ಕುಸಿದರೂ ಕಳಪೆ ಕಾಮಗಾರಿ ಕುರಿತು ತನಿಖೆ ನಡೆದಿಲ್ಲ. ಗಂಗೊಳ್ಳಿಗೆ ಮೀನುಗಾರರ ವಿರೋಧ ಇದ್ದರೂ ಹೊಸ ವ್ಯಾಪಾರಿ ಬಂದರು ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಮತ್ಸ್ಯಾಶ್ರಯ ಮನೆ ಇನ್ನೂ ಕೊಟ್ಟಿಲ್ಲ. ಆದ್ದರಿಂದ ಈ ಸರಕಾರ ಮೀನುಗಾರರ ಹಿತ ಕಾಯುವುದಿಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಜನ ಸೇರಿಸಲು ಆಡಳಿತ ಯಂತ್ರ ದುರುಪಯೋಗ:

ಇಂದು ಭ್ರಷ್ಟ ಬಿಜೆಪಿಯ ಆಡಳಿತವನ್ನು ಜನರು ತಿರಸ್ಕರಿಸುತ್ತಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ಕಮಿಶನ್ ನಿಂದ ಎಲ್ಲರೂ ಬೇಸತ್ತಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಜನರು ಸಂಪೂರ್ಣ ತಿರುಗಿ ಬಿದ್ದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನರನ್ನು ಸೇರಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಜನರನ್ನು ಸೇರಿಸಲು ಶಿಕ್ಷಣ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಶಿಕ್ಷಣ ಇಲಾಖೆಯ ಮೂಲಕ ಪೆÇೀಷಕರನ್ನು ಕರೆತರುವ ಕೆಲಸ ಮಾಡಿದ್ದಾರೆ. ಹಿಂದೆಂದೂ ಈ ರೀತಿ ನಡೆದಿಲ್ಲ, ಇದೊಂದು ನಾಚಿಕೆಗೇಡಿನ ಸಂಗತಿ. ಜನ ಸೇರಿಸುವಲ್ಲಿ ಶಾಸಕರ ವರ್ಚಸ್ಸು ವಿಫಲವಾಗುವ ಕಾರಣ ಸರ್ಕಾರಿ ಆಡಳಿತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡವರು ಈಗ ಎಲ್ಲಿದ್ದಾರೆ? ಬೈಂದೂರಿನಲ್ಲಿ ಕಮಿಶನ್ ವ್ಯವಹಾರ ಇಲ್ಲದೇ ಯಾವುದೇ ಕಾಮಗಾರಿಗಳು ಮಂಜೂರಾಗುತ್ತಿಲ್ಲ. ಕಮಿಶನ್ ಇತ್ಯರ್ಥವಾಗದೇ ಕಾಮಗಾರಿಗೆ ಭೂಮಿ ಪೂಜೆಯೂ ನಡೆಯುತ್ತಿಲ್ಲ.

ಸಮರ್ಥ ವಿರೋಧ ಪಕ್ಷವಾಗಿ ಕಾಂಗ್ರೆಸ್ ಇವೆಲ್ಲವನ್ನೂ ವಿರೋಧಿಸುತ್ತದೆ. ಜನ ಬಿಜೆಪಿಯ ದುರಾಡಳಿತವನ್ನು ಗಮನಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ವಕ್ತಾರ ವಿಕಾಸ ಹೆಗ್ಡೆ ಮಾತನಾಡಿ, ಮುಖ್ಯಂಮತ್ರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಅಧಿಕೃತವಾಗಿ ಬಿಜೆಪಿ ಸಮಾವೇಶ ಎಂದೇ ನಡೆಸಬಹುದಿತ್ತು. ಆದರೆ ಭ್ರಷ್ಟಾಚಾರ, ಕಮಿಷನ್‍ನಂತಹ ಆರೋಪಗಳಿಂದ ಜನ ಬರುವುದಿಲ್ಲ ಎಂದು ಆಡಳಿತ ಯಂತ್ರದ ಮೂಲಕ ಜನ ಸೇರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಕಡ್ಡಾಯ ಹಾಜರಾತಿಗೆ ಆದೇಶ ಮಾಡಿರುವುದು ಪ್ರಜಾಪ್ರಭುತ್ವದ ಉಲ್ಲಂಘನೆ. ಬಿಜೆಪಿ ಹತಾಶೆಯಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಇದ್ದರು.


Spread the love

Leave a Reply

Please enter your comment!
Please enter your name here