ಕೆಸರು ಗದ್ದೆಯಲ್ಲಿ ಆಟ ಆಡಿ ಸಂಭ್ರಮಿಸಿದ ಉಡುಪಿ ಪೊಲೀಸರು!

Spread the love

ಕೆಸರು ಗದ್ದೆಯಲ್ಲಿ ಆಟ ಆಡಿ ಸಂಭ್ರಮಿಸಿದ ಉಡುಪಿ ಪೊಲೀಸರು!

ಉಡುಪಿ: ಸದಾ ಸಮವಸ್ತ್ರ ಧರಿಸಿ ಕರ್ತವ್ಯದಲ್ಲಿರುತ್ತಿದ್ದ ಪೊಲೀಸರು ಶನಿವಾರ ಪಕ್ಕಾ ಗ್ರಾಮೀಣ ಉಡುಗೆ ಧರಿಸಿಕೊಂಡು ಕೆಸರುಗದ್ದೆಯಲ್ಲಿ ಎದ್ನೊ ಬಿದ್ನೋ ಎಂಬ ರೀತಿಯಲ್ಲಿ ಒತ್ತಡಮುಕ್ತವಾಗಿ ಉಲ್ಲಾಸದಿಂದ ಕಳೆದ ದೃಶ್ಯ ಉಡುಪಿಯ ಕರಂಬಳ್ಳಿಯಲ್ಲಿ ಕಂಡುಬಂತು. ಅದರಲ್ಲೂ ಕೂಡ ಈಗ ಸುದ್ದಿಯಲ್ಲಿರುವ ಕಾಂತಾರಾ ಸಿನೆಮಾ ಶೈಲಿಯಲ್ಲಿ ಲುಂಗಿಯಲ್ಲಿ ಪೊಲೀಸರು ಕಂಡುಬಂದಿರುವುದು ವಿಶೇಷವಾಗಿತ್ತು.

ಉಡುಪಿ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರ ವಿನೂತನ ಕಲ್ಪನೆಯಲ್ಲಿ ತನ್ನ ಸಿಬಂದಿಗಳಿಗೆ ಕೆಸರು ಗದ್ದೆಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಿದ್ದರು.

ನಗರದ ಕರಂಬಳ್ಳಿ ಸಮೀಪದ ಗದ್ದೆಯಲ್ಲಿ ಶನಿವಾರ ಪೊಲೀಸರು ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ವಾಲಿಬಾಲ್, ನಿಧಿ ಶೋಧನೆಯಂತ ಆಟಗಳಲ್ಲಿ ಎಸ್ಪಿಯಿಂದ ಹಿಡಿದು ಕಾನ್ ಸ್ಟೇಬಲ್ ವರೆಗಿನ ಎಲ್ಲಾ ಪೊಲೀಸ್ ಸಿಬಂದಿಗಳು ಭಾಗವಹಿಸಿದ್ದರು. ಒಂದೆಡೆ ಸ್ಪರ್ಧೆಗಳಲ್ಲಿ ಗೆಲ್ಲುವ ತವಕ ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿ ಪೊಲೀಸರು ಸಖತ್ ಎಂಜಾಯ್ ಮಾಡಿದರು. ಕೆಸರಿನ ಗದ್ದೆಯಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಪೊಲೀಸರಿಗೆ ಒಂದು ರೀತಿಯಲ್ಲಿ ಕೆಸರು ಗದ್ದೆ ಆಟಗಳು ಮೊದಲ ಬಾರಿಯಾಗಿದ್ದು ಓಟದ ಸ್ಪರ್ಧೆಯಲ್ಲಿ ಹಲವರು ಕೆಸರಿನಲ್ಲಿ ಬಿದ್ದರೂ ಎದ್ದು ಮತ್ತೆ ಓಡಿ ಗಮನ ಸೆಳೆದರು. ಗದ್ದೆಗಳಿದ ಪೊಲೀಸರು ಹಿರಿಯ ಕಿರಿಯ ಅಧಿಕಾರಿಗಳು ಎನ್ನುವುದನ್ನು ಮರೆತು ಎಲ್ಲರೂ ಕೂಡ ಒಬ್ಬರನ್ನೊಬ್ಬರು ಎಳೆದಾಡುತ್ತಾ ಕೆಸರು ನೀರಿನಲ್ಲಿ ಮುಳುಗೇಳುತ್ತಾ ಸಂಭ್ರಮಿಸಿದರು.

ಈ ಬಗ್ಗೆ ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಎಮ್ ಹಾಕೆ ಅವರು ಪೊಲೀಸರು ಸದಾ ಒತ್ತಡದಿಂದ ಕಾರ್ಯಚರಿಸುತ್ತಿದ್ದು ವರ್ಷಕ್ಕೊಮ್ಮೆ ಜಿಲ್ಲಾ ಪೊಲೀಸ್ ವತಿಯಿಂದ ಕ್ರೀಡಾ ಕೂಟ ಆಯೋಜಿಸಲಾಗುತ್ತದೆ. ಈ ಬಾರಿ ಪೊಲೀಸರು ಇನ್ನಷ್ಟು ಹೆಚ್ಚು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಕೆಸರುಗದ್ದೆ ಆಟಗಳನ್ನು ಆಯೋಜಿಸಿ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ. ಇಲ್ಲಿಯ ಸಿಬಂದಿಗಳಿ ಇಲ್ಲಿನ ಕರಾವಳಿ ಭಾಗದ ಸಂಸ್ಕೃತಿಗೆ ಒಗ್ಗಿಕೊಂಡಿದ್ದು ಅದಕ್ಕೆ ಈ ಕ್ರೀಡೆಯ ಮೂಲಕ ಪ್ರೋತ್ಸಾಹ ನೀಡಿದಂತಾಗುತ್ತದೆ. ಉಡುಪಿಯಲ್ಲಿ ಬೇರೆ ಜಿಲ್ಲೆಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗಳಿಗೆ ಹಾಗೂ ಬೇರೆ ರಾಜ್ಯಗಳಿಂದ ಬಂದ ಹಿರಿಯ ಅಧಿಕಾರಿಗಳಿಗೆ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದಂತಾಗುತ್ತದೆ. ಇಲ್ಲಿನ ಕಲೆ ಸಂಸ್ಕೃತಿಯೊಂದಿಗೆ ನಾವೆಲ್ಲಾ ಒಟ್ಟಿಗೆ ಬೆರೆತುಕೊಂಡು ಇಂದು ಎಲ್ಲಾ ಸಿಬಂದಿಗಳು ಉತ್ಸಾಹದಿಂದ ಈ ಸ್ಪರ್ಧೆಗಳನ್ನು ಭಾಗವಹಿಸಿದ್ದಾರೆ ಎಂದರು.


Spread the love

Leave a Reply

Please enter your comment!
Please enter your name here