ಕೆ.ಆರ್.ಪೇಟೆಯಲ್ಲಿ ಆಷಾಢ ಪೂಜಾ, ಕರಗ ಮಹೋತ್ಸವ

Spread the love

ಕೆ.ಆರ್.ಪೇಟೆಯಲ್ಲಿ ಆಷಾಢ ಪೂಜಾ, ಕರಗ ಮಹೋತ್ಸವ

ಕೃಷ್ಣರಾಜಪೇಟೆ: ಕಡೆಯ ಆಶಾಡ ಶುಕ್ರವಾರದ ಅಂಗವಾಗಿ ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಗೆ ಕೆ.ಆರ್.ಪೇಟೆ ಪಟ್ಟಣದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು, ಕರಗ ಮಹೋತ್ಸವ ಹಾಗೂ ಬೆಣ್ಣೆಯ ಅಲಂಕಾರ ಸೇವೆಯು ಶ್ರದ್ಧಾಭಕ್ತಿಯಿಂದ ನಡೆಯಿತು.

ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿ ಶಿಲಾಮೂರ್ತಿಗೆ ವಿಶೇಷವಾಗಿ ಬೆಣ್ಣೆಯಿಂದ ಅಲಂಕಾರ ಮಾಡಿ ಡ್ರೈಪ್ರೂಟ್ಸ್‌ಗಳು ಮತ್ತು ಚೆರ್ರಿ ಹಣ್ಣಿನಿಂದ ಸಿಂಗರಿಸಲಾಗಿತ್ತು. ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾಯಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಮಾಡಿ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು.

ವೇದಬ್ರಹ್ಮ ಶ್ರೀ ರವಿಶಾಸ್ತ್ರಿಶರ್ಮ ಅವರ ನೇತೃತ್ವದಲ್ಲಿ ಪೂಜಾ ಪುರಸ್ಕಾರಗಳು ನಡೆದವು. ದಾನಿಗಳಾದ ಪರಿಮಳ ನಾಗರಾಜಶೆಟ್ಟಿ ದಂಪತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಚೌಡೇಶ್ವರಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್.ಎಂ.ಚಂದ್ರಶೇಖರ್, ಮಾಜಿಅಧ್ಯಕ್ಷ ಕಬಾಬ್ ನಾರಾಯಣಪ್ಪ, ಪುರಸಭೆ ಮಾಜಿಅಧ್ಯಕ್ಷ ಕೆ.ಸಿ.ವಾಸು, ಸಮಾಜಸೇವಾ ಕಾರ್ಯಕರ್ತರಾದ ಕೆ.ಎಸ್.ಮೋಹನಕುಮಾರ್, ಪೋಲಿಸ್ ಮಾದಯ್ಯ, ಕೆ.ಆರ್.ಚಂದ್ರಶೇಖರ್, ಕೆ.ಎಸ್.ಮಧುಸೂಧನ್, ಕೆ.ಆರ್.ಮಹೇಶ್, ಕೈಗೋನಹಳ್ಳಿ ಈರಪ್ಪಣ್ಣ, ವಿದ್ಯಾರ್ಥಿಭಂಡಾರ್ ಸುರೇಶ್, ಕೆ.ಜಿ.ಕುಮಾರ್, ಶ್ರೀರಂಗಪಟ್ಟಣದ ಕುಮಾರಸ್ವಾಮಿ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪಟ್ಟಣದ ನೇಕಾರ ತೊಗಟವೀರ ಸಮಾಜದ ಕುಲಬಾಂಧವರು ಆಯೋಜಿಸಿದ್ದ ೧೦ನೇ ವರ್ಷದ ಶ್ರೀಚಾಮುಂಡೇಶ್ವರಿದೇವಿಯ ಕರಗ ಮಹೋತ್ಸವವು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಿತು. ಪಟ್ಟಣದ ಪುರಾನ ಪ್ರಸಿದ್ಧವಾದ ದೇವಿರಮ್ಮಣ್ಣಿ ಕೆರೆಯಿಂದ ತಾಯಿ ಚಾಮುಂಡೇಶ್ವರಿದೇವಿಯ ಕರಗವನ್ನು ಶಾಸ್ತ್ರಬದ್ಧವಾದ ಬಾಲಕಿಯರ ತಲೆಯ ಮೇಲೆ ಹೊರಿಸಿ ನಡೆಮುಡಿಯ ಮೇಲೆ ಶ್ರೀ ಚನ್ನಬಸವೇಶ್ವರ ದೇವಾಲಯದ ಪಕ್ಕದಲ್ಲಿನ ದೇವಿಯ ಕರಗದ ಜಾಗಕ್ಕೆ ತರಲಾಯಿತು.

ಮಂಡ್ಯ ಜಿಲ್ಲಾ ನೇಕಾರ ತೊಗಟವೀರ ಸಮಾಜದ ಹಿರಿಯ ಮುಖಂಡ ಹಂಸರಮೇಶ್ ಅವರ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಗಲಲ್ಲಿ ಮೆರವಣಿಗೆ ನಡೆಸಿ ಕರಗವನ್ನು ತರಲಾಯಿತು. ಕೋವಿಡ್ ಮಹಾಮಾರಿಯ ರುದ್ರನರ್ತನವು ಶಾಸ್ವತವಾಗಿ ದೂರಾಗುವಂತೆ, ಕೋವಿಡ್ ಸೂಕ್ಷ್ಮಾಣುಜೀವಿಗಳನ್ನು ದೇವಿಯು ನಾಶಪಡಿಸಿ ಲೋಕಕ್ಕೆ ಆರೋಗ್ಯವನ್ನು ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಮುತ್ತೈದೆಯರು ಹಾಗೂ ದೇವರ ಗುಡ್ಡರು ವಿಶೇಷವಾಗಿ ಹಾಡುಗಳನ್ನು ಹಾಡುವ ಮೂಲಕ ಕರಗವನ್ನು ಹೊತ್ತಿದ್ದ ಬಾಲಕಿಯರ ಮೈಮೇಲೆ ದೇವಿಯ ಆವಾಹನೆ ಮಾಡಿಸಿದ ನಂತರ ಕರಗದ ಮೆರವಣಿಗೆಯು ಸಾಂಘವಾಗಿ ನಡೆಯಿತು.


Spread the love