
ಕೆ.ಆರ್.ಪೇಟೆಯಲ್ಲಿ ಚಿರತೆ ದಾಳಿಗೆ ರೈತ ಬಲಿ
ಕೆ.ಆರ್.ಪೇಟೆ: ಜಮೀನಿನಲ್ಲಿ ರಾತ್ರಿ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರೈತನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಿ.ಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂತೇಬಾಚಹಳ್ಳಿ ಹೋಬಳಿಯ ಬಿ. ಗಂಗನಹಳ್ಳಿ ಗ್ರಾಮದ ಬಡ ರೈತ ಮರೀಗೌಡರ ಮಗ ಮಾಯಪ್ಪ (37) ಎಂಬುವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಜಮೀನಿನ ಪಕ್ಕದ ಗುಡ್ಡದಲ್ಲಿ ಪತ್ತೆಯಾಗಿದೆ.
ಜಮೀನಿನ ಕೆಲಸದ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದು 4 ದಿನಗಳ ಕಾಲ ಮನೆಗೆ ಬರುತ್ತಿರಲಿಲ್ಲ. ಈ ಮದ್ಯೆ ಇವರು ಕೆಲಸಕ್ಕೆ ಹೋಗಿದ್ದರೆಂದು ಕುಟುಂಬದವರು ಭಾವಿಸಿದ್ದರು. ಆದರೆ ನಾಲ್ಕು ದಿನಗಳ ಬಳಿಕ ಮನೆಗೆ ಮಾಯಪ್ಪ ಮರಳಿ ಬರಲಿಲ್ಲ. ಇದೆ ಸಮಯಕ್ಕೆ ಕುರಿಗಾಯಿಗಳಿಗೆ ಅವರ ಜಮೀನು ಸರ್ವೇ ನಂಬರ್ 31 ರ ಬಳಿ ಕೊಳೆತ ಮೃತದೇಹ ಪತ್ತೆಯಾಗಿತ್ತು ನೋಡಲು ಜನಸಾಗರ ಹರಿದು ಬಂದಿತ್ತು.
ಈ ವೇಳೆಯಲ್ಲಿ ಮೃತ ಪತ್ನಿ ರೇಖಾ ತನ್ನ ಗಂಡನ ಮೃತದೇಹ ಕಂಡು ಗೋಳಾಡಿದ ಘಟನೆ ನಡೆದಿತ್ತು. ರಾತ್ರಿ ವೇಳೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಚಿರತೆ ಕಾಣಿಸಿಕೊಳ್ಳುತಿತ್ತು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತಿಳಿಸಿದ್ದು ಚಿರತೆ ದಾಳಿ ಮಾಡಲಾಗಿದೆ ಎನ್ನಲಾಗಿದೆ.
ವಿಷಯ ತಿಳಿದ ಕಿಕ್ಕೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹಾಗೂ ಸಬಿಂಗ್ ಸ್ಪೆಕ್ಟರ್ ಸಿದ್ದಲಿಂಗ ಬನಾಸೆ, ಶಾಂತ್ ಕುಮಾರ್, ಕುಮಾರ್ ಹಾಗೂ ಮಾರೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರ್ಷವರ್ದಿನಿ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ಪೊಲೀಸರು ದೂರು ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಷಯ ತಿಳಿದ ತಾಲ್ಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್ ಗಂಗಾಧರ್, ಭರತ್, ಆನಂದ್, ಶಿವಮೂರ್ತಿ ತಂಡ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ, ಸಾರ್ವಜನಿಕರು ಕಾಡು ಪ್ರಾಣಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು