ಕೆ.ಆರ್.ಪೇಟೆಯಲ್ಲಿ ನೆನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ

Spread the love

ಕೆ.ಆರ್.ಪೇಟೆಯಲ್ಲಿ ನೆನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ

ಕೆ.ಆರ್.ಪೇಟೆ: ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾದ ಒಳಚರಂಡಿ ಯೋಜನೆಯು ನೆನಗುದಿಗೆ ಬಿದ್ದಿದ್ದು ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಅಲ್ಲಲ್ಲಿ ಮ್ಯಾನ್‌ ಹೋಲ್‌ಗಳು ತ್ಯಾಜದಿಂದ ಉಕ್ಕಿ ಹರಿಯುತ್ತಿದ್ದು ಜನ ಹಿಡಿಶಾಪ ಹಾಕುತ್ತಾ ಜೀವನ ಮಾಡುವಂತಾಗಿದೆ.

ಕೆ.ಆರ್.ಪೇಟೆ ಮತ್ತು ಹೊಸಹೊಳಲು ಅವಳಿ ಪಟ್ಟಣಗಳ 25ಸಾವಿರ ಜನಸಂಖ್ಯೆಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರವು 13ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಿದ್ದ ಒಳಚರಂಡಿ ಯೋಜನೆಯ ಕಾಮಗಾರಿಯು ಶೇ.60ರಷ್ಟು ಮಾತ್ರ ಮುಗಿದಿದ್ದರೂ ಅಕ್ರಮವಾಗಿ ಬಲಾಢ್ಯರು ಹಾಗೂ ಪ್ರಭಾವಿ ವ್ಯಕ್ತಿಗಳು ಒಳಚರಂಡಿ ಯೋಜನೆಯ ಪೈಪುಗಳಿಗೆ ತಮ್ಮ ತಮ್ಮ ಮನೆಗಳು, ಸಮುದಾಯ ಭವನಗಳು, ವಾಣಿಜ್ಯ ಸಮುಚ್ಛಯಗಳು ಸೇರಿದಂತೆ ವಿದ್ಯಾರ್ಥಿ ನಿಲಯಗಳ ಶೌಚಾಲಯದ ಸಂಪರ್ಕವನ್ನು ನೀಡಿರುವುದರಿಂದ ಎಲ್ಲೆಂದರಲ್ಲಿ ಮ್ಯಾನ್‌ಹೋಲ್‌ಗಳಲ್ಲಿ ತುಂಬಿರುವ ತ್ಯಾಜ್ಯವು ಸರಾಗವಾಗಿ ಹರಿಯದಿರುವುದರಿಂದ ಎಲ್ಲೆಂದರಲ್ಲಿ ಮ್ಯಾನ್ ಹೋಲ್‌ಗಳ ಮೂಲಕ ಹೊರಕ್ಕೆ ಉಕ್ಕಿ ಹರಿಯುತ್ತಿದ್ದು ಗಬ್ಬುವಾಸನೆ ನಡುವೆ ಬದುಕುವಂತಾಗಿದೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯವು ಪಟ್ಟಣದ ಮೈಸೂರು ರಸ್ತೆಯಲ್ಲಿರುವ ವೆಟ್‌ ವೆಲ್‌ನಲ್ಲಿ ಸಂಗ್ರಹವಾಗುತ್ತದೆ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯಯುಕ್ತ ನೀರನ್ನು ಹೊಸಹೊಳಲು ಗ್ರಾಮದ ಹೊರವಲಯದ ವೆಟ್‌ ವೆಲ್‌ ನಲ್ಲಿ ಸಂಗ್ರಹಿಸಿ ಇಲ್ಲಿಂದ ಕೊಮ್ಮೇನಹಳ್ಳಿ ಬಳಿ ನಿರ್ಜನ ಅರಣ್ಯಪ್ರದೇಶದಲ್ಲಿ 5ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ 4ಸಾವಿರ ಕೆಪಿಎಲ್‌ಡಿ ಸಾಮರ್ಥ್ಯದ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸಿ ಅಲ್ಲಿ ನಿರ್ಮಿಸಿರುವ ನಾಲ್ಕು ಮಾದರಿಯ ಕೊಳಗಳಲ್ಲಿ ತ್ಯಾಜ್ಯ ಹಾಗೂ ನೀರನ್ನು ಪ್ರತ್ಯೇಕವಾಗಿ ಸಂಸ್ಕರಿಸಿ, ಸಂಸ್ಕರಣಗೊಂಡ ನೀರನ್ನು ಕಬ್ಬು, ಭತ್ತ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಬೇಸಾಯಕ್ಕೆ ನೀಡಲು ಸಜ್ಜುಗೊಳಿಸಲಾಗಿದೆ.

ಆದರೆ ನಿರ್ವಹಣೆಯ ಕೊರತೆಯಿಂದಾಗಿ 5ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಘನತ್ಯಾಜ್ಯ ಸಂಸ್ಕರಣಾ ಘಟಕವು ಗಿಡಗಂಟಿಗಳು ಬೆಳೆದು ಕಾಡಾಗಿ ಪರಿವರ್ತನೆಯಾಗಿದ್ದು ಯೋಜನೆಯ ಮೂಲ ಉದ್ದೇಶವೇ ವ್ಯರ್ಥವಾಗಿದೆಯಲ್ಲದೇ ಸರ್ಕಾರದ 20ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವು ವ್ಯರ್ಥವಾಗಿದೆ.

ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಂದು ಶಾಸಕರಾಗಿದ್ದ ಕಾಂಗ್ರೇಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದ ಶಾಸಕ ವರ್ತೂರುಪ್ರಕಾಶ್ ಅವರನ್ನು ಕರೆತಂದು ಪಟ್ಟಣದ ಜನತೆಯ ಬಹುವರ್ಷಗಳ ಬೇಡಿಕೆಯಾಗಿಒದ್ದ ಒಳಚರಂಡಿ ಯೋಜನೆಯ ಕಾಮಗಾರಿಗೆ ಭೂಮಿಪೂಜೆಯನ್ನು ಮಾಡಿಸಿದ್ದರು. ಆದರೆ ಕೆ.ಆರ್.ಪೇಟೆ ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಗಮನ ಹರಿಸದ ರಾಜಕಾರಣಿಯೂ ಒಳಚರಂಡಿ ಯೋಜನೆಯನ್ನು ಸಂಪೂರ್ಣಗೊಳಿಸಿ ಪಟ್ಟಣದ ಜನತೆಯ ಸೇವೆಗೆ ಸಮರ್ಪಿಸಲು ಮುಂದಾಗದಿರುವುದು ವಿಪರ್ಯಾಸವೇ ಸರಿ.

ಸಚಿವ ನಾರಾಯಣಗೌಡ ಅವರು ಪಟ್ಟಣದ ಜನತೆಯ ಋಣವು ನನ್ನ ಮೇಲಿದೆ ಎಂದು ಭಾಷಣ ಮಾಡುತ್ತಾರೆಯೇ ಹೊರತು ಅಗ್ರಹಾರ ಭಾಗದಲ್ಲಿ ವೆಟ್‌ ವೆಲ್ ನಿರ್ಮಿಸಲು ಬೇಕಾದ ಅಗತ್ಯ ಸ್ಥಳವನ್ನು ದೊರಕಿಸಿಕೊಟ್ಟು ಯೋಜನೆಯು ಸಂಪೂರ್ಣವಾಗಲು ಬೇಕಾದ ಪೂರಕವಾದ ಸಹಕಾರವನ್ನು ಮಾತ್ರ ನೀಡುತ್ತಿಲ್ಲ. 13 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣವಾಗಬೇಕಾಗಿದ್ದ ಯೋಜನೆಯು ಇಂದು 28ಕೋಟಿ ರೂ ವೆಚ್ಚಕ್ಕೆ ತಲುಪಿದ್ದು ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಯು ಮಾತ್ರ ಸಂಫೂರ್ಣವಾಗದೇ ನೆನಗುದಿಗೆ ಬಿದ್ದಿದೆ.

ಪುರಸಭೆಯ ಅಧ್ಯಕ್ಷೆ ಮಹಾದೇವಿ, ನಗರನೀರು ಸರಬರಾಜು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುರಾಜ್, ಮುಖ್ಯಾಧಿಕಾರಿ ಬಸವರಾಜು ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಸಂಪೂರ್ಣಗೊಳಸಲು ಮುಂದಾಗದಿರುವುದು ಪಟ್ಟಣದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ದಿನಬೆಳಿಗ್ಗೆಯಾದರೆ ಎಲ್ಲೆಂದರಲ್ಲಿ ಒಳಚರಂಡಿ ಯೋಜನೆಯ ಮ್ಯಾನ್‌ ಹೋಲ್‌ಗಳ ಮೂಲಕ ಶೌಚದ ತ್ಯಾಜ್ಯವು ವಿವಿಧ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಉಕ್ಕಿ ಹರಿಯುತ್ತಿರುವುದರಿಂದ ಕೆ.ಆರ್.ಪೇಟೆ ಪಟ್ಟಣದ ಜನರು ಹಲವು ರೋಗರುಜಿನಗಳಿಂದ ಬಳಲುವಂತಾಗಿದೆಯಲ್ಲದೇ, ಪಟ್ಟಣದ ಬಹು ವರ್ಷಗಳ ಕನಸು ಮಾತ್ರ ನನಸಾಗದೇ ಹಾಗೆಯೇ ಉಳಿದಿದೆ. ಕೆ.ಆರ್.ಪೇಟೆ ಕ್ಷೇತ್ರವು ಸಚಿವರನ್ನು ಹೊಂದಿದ್ದರೂ ಬಹು ಬೇಡಿಕೆಯ ಕಾಮಗಾರಿಯು ಅಗತ್ಯವಾಗಿ ಬೇಕಾದ ಅನುದಾನವಿದ್ದರೂ ಸಂಪೂರ್ಣಗೊಳ್ಳದೇ ನೆನಗುದಿಗೆ ಬಿದ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.


Spread the love