ಕೆ.ಆರ್.ಪೇಟೆಯಲ್ಲಿ ಹೈಟೆಕ್ ಒಳಾಂಗಣದ ಕ್ರೀಡಾಂಗಣ ನಿರ್ಮಾಣ

Spread the love

ಕೆ.ಆರ್.ಪೇಟೆಯಲ್ಲಿ ಹೈಟೆಕ್ ಒಳಾಂಗಣದ ಕ್ರೀಡಾಂಗಣ ನಿರ್ಮಾಣ

ಮಂಡ್ಯ: ಜಿಲ್ಲೆಯಲ್ಲಿಯೇ ವಿಭಿನ್ನ, ವಿಶಿಷ್ಟ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಒಳಾಂಗಣ ಕ್ರೀಡಾಂಗಣವನ್ನು ತಾಲೂಕು ಕೇಂದ್ರವಾದ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಸುಮಾರು 15ಕೋಟಿ ರೂಪಾಯಿಗಳ ವೆಚ್ಚದ ಹೈಟೆಕ್ ಒಳಾಂಗಣದ ಕ್ರೀಡಾಂಗಣದ ಕಾಮಗಾರಿ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಮಕ್ಕಳು ಹಾಗೂ ಯುವಜನರು ಈಜಿನಲ್ಲಿ ತರಬೇತಿ ಹೊಂದಲು ಬೇಕಾದ ಬಿಸಿನೀರು ಹಾಗೂ ತಣ್ಣೀರಿನ ವ್ಯವಸ್ಥೆಯನ್ನು ಹೊಂದಿರುವ ಈಜುಕೊಳಗಳು, ಸುಸಜ್ಜಿತವಾದ ಜಿಮ್, ಸ್ನೂಕರ್, ಬಿಲಿಯಡ್ಸ್, ಶೆಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಟೇಬಲ್ ಟೆನ್ನಿಸ್, ಜೆಮ್ನಾಷಿಯಂ, ಡಿಜಿಟಲ್‌ ಸೌಲಭ್ಯ ಒಳಗೊಂಡಿರುವ ಸುಸಜ್ಜಿತವಾದ ಗ್ರಂಥಾಲಯ, ವಿಶ್ರಾಂತಿ ಕೊಠಡಿಗಳು, ಸ್ನಾನ ಗೃಹಗಳು ಸೇರಿದಂತೆ ಜಾಗತಿಕ ಕ್ರೀಡೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಕಲಿಕೆ ಹಾಗೂ ತರಬೇತಿಯನ್ನು ನೀಡಲು ಬೇಕಾದ ಅತ್ಯಾಧುನಿಕ ಗುಣಮಟ್ಟದ ಅತ್ಯಾದುನಿಕ ಸೌಲಭ್ಯಗಳನ್ನು ಈ ಕ್ರೀಡಾಂಗಣದಲ್ಲಿ ಅಳವಡಿಸಲಾಗುತ್ತಿದೆ.

ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದ ಸುತ್ತಲೂ ಸುಸಜ್ಜಿತವಾದ ಜಾಗಿಂಗ್ ಟ್ರ್ಯಾಕ್, ಹಸಿರು ಹುಲ್ಲಿನ ಹಾಸು ಹಾಗೂ ಗಿಡಮರಗಳಿಂದ ಕೂಡಿರುವ ಸುಂದರವಾದ ಲಾನ್ ಕೂಡ ಒಳಾಂಗಣ ಕ್ರೀಡಾಂಗಣದಲ್ಲಿ ಮೇಳೈಸಲಿದೆ.

ಈ ಕ್ರೀಡಾಂಗಣ ಕಾಮಗಾರಿಯನ್ನು ವೀಕ್ಷಿಸಿದ ರಾಜ್ಯದ ಯುವಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಆದಷ್ಟು ಶೀಘ್ರವಾಗಿ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಒಳಾಂಗಣ ಕ್ರೀಡಾಂಗಣಕ್ಕೆ ಸಚಿವ ನಾರಾಯಣಗೌಡ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮುಖಂಡರಾದ ದೊಡ್ಡಕ್ಯಾತನಹಳ್ಳಿ ಪರಮೇಶ್, ಕೆ.ಜಿ.ತಮ್ಮಣ್ಣ, ಪುರಸಭೆ ಸದಸ್ಯರಾದ ಶಾಮಿಯಾನ ತಿಮ್ಮೇಗೌಡ, ಹೆಚ್.ಆರ್.ಲೋಕೇಶ್, ಮಾಜಿಸದಸ್ಯ ಕೋಳಿನಾಗರಾಜು, ಸಚಿವರ ಮಾಧ್ಯಮ ಸಂಯೋಜಕ ಪ್ರದೀಪ್‌ಕುಮಾರ್, ಆಪ್ತಸಹಾಯಕ ದಯಾನಂದ, ಪುರಸಭೆಯ ಮುಖ್ಯಾಧಿಕಾರಿ ಬಸವರಾಜು ಸೇರಿದಂತೆ ಕ್ರೀಡಾಪಟುಗಳು ಇದ್ದರು.


Spread the love